
ಬೆಂಗಳೂರು, ಜನವರಿ 30: ಆರ್ಎಸ್ಎಸ್ ಮತ್ತು ಬಿಜೆಪಿಯವರು ಮಹಾತ್ಮ ಗಾಂಧಿಯನ್ನು ಕೊಂದ ಮತಾಂಧ ಗೋಡ್ಸೆಯ ಆರಾಧಕರು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್ಎಸ್ಎಸ್ನವರು ಹಂತಕ ಗೋಡ್ಸೆ ವಂಶಸ್ಥರು. ಆದರೆ, ನಾವೆಲ್ಲ ಗಾಂಧೀಜಿ ವಂಶಸ್ಥರು ಎಂದರು.
1948ರ ಜನವರಿ 30ರಂದು ಮಹಾತ್ಮ ಗಾಂಧೀಜಿ ಹತ್ಯೆ ನಡೆಯಿತು. ಮತಾಂಧ ನಾಥುರಾಮ್ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ. ನಾಥುರಾಮ್ ಗೋಡ್ಸೆ ಗಾಂಧೀಜಿಯನ್ನು ಕೊಲೆ ಮಾಡಿರಬಹುದು, ಆದರೆ ಗಾಂಧೀಜಿ ಮೌಲ್ಯಗಳನ್ನು ಕೊಲ್ಲಲು ಆಗಲ್ಲ, ಸಾಧ್ಯವಿಲ್ಲ. ಇವತ್ತಿಗೂ ಗಾಂಧೀಜಿ ವಿಚಾರಗಳು ಭಾರತ, ಜಗತ್ತಿನಲ್ಲಿ ಪ್ರಸ್ತುತ. ನಿಮ್ಮ ಸಂದೇಶ ಏನೆಂದಾಗ ನನ್ನ ಜೀವನವೇ ನನ್ನ ಸಂದೇಶ ಎಂದಿದ್ದವರು ಅವರು. ಇದು ನಮಗೆಲ್ಲರಿಗೂ ಪ್ರೇರಣೆ. ಸತ್ಯ, ಅಹಿಂಸೆ, ಸತ್ಯಾಗ್ರಹ ಮೂಲಕ ಸ್ವತಂತ್ರ ತಂದಿದ್ದು ಬೇರೆಲ್ಲೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.