
ನವದೆಹಲಿ, ಜನವರಿ 30: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1, ಶನಿವಾರದಂದು ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಸತತ ಎಂಟನೇ ಬಜೆಟ್ ಮಂಡನೆ ಆಗಿದೆ. ಮಂದಗೊಳ್ಳುವಂತೆ ತೋರುತ್ತಿರುವ ಆರ್ಥಿಕತೆಗೆ ಚುರುಕು ಮುಟ್ಟಿಸುವ ಬಹುದೊಡ್ಡ ಸವಾಲು ಮತ್ತು ನಿರೀಕ್ಷೆಗಳು ಈ ಬಜೆಟ್ನಲ್ಲಿವೆ. ಮಧ್ಯಮ ವರ್ಗದವರ ಮೇಲಿರುವ ಅಪಾರ ತೆರಿಗೆ ಹೊರೆಯ ಭಾರ ಇಳಿಸುವ ಅಪೇಕ್ಷೆಯೂ ಇದೆ. ವಿವಿಧ ಉದ್ಯಮಗಳು ಹೆಚ್ಚಿನ ಉತ್ತೇಜನಕ್ಕಾಗಿ ಕಾಯುತ್ತಿವೆ. ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂಬ ಒತ್ತಡವೂ ಇದೆ. ಇಷ್ಟೆಲ್ಲಾ ನಿರೀಕ್ಷೆ, ಅಪೇಕ್ಷೆ, ಒತ್ತಡಗಳ ನಡುವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ನಲ್ಲಿ ಯಾವುದಕ್ಕೆ ಹೆಚ್ಚು ಗಮನ ಕೊಡಬಹುದು ಎನ್ನುವ ಕುತೂಹಲವಂತೂ ಇದೆ.
ಕೇಂದ್ರ ಬಜೆಟ್ ಭಾಷಣ….
ಫೆಬ್ರುವರಿ 1, ಶನಿವಾರ ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರಿಂದ ಸಂಸತ್ತಿನಲ್ಲಿ ಬಜೆಟ್ ಮಂಡನೆ ಆರಂಭವಾಗುತ್ತದೆ. 2024ರ ಬಜೆಟ್ನಲ್ಲಿ ಅವರ ಭಾಷಣ ಸುದೀರ್ಘದ್ದಾಗಿತ್ತು. ಈ ಬಾರಿಯದ್ದು ಅವರಿಗೆ ಎಂಟನೇ ಬಜೆಟ್ ಆಗಿದೆ. ಇದರಲ್ಲಿ ಎರಡು ಮಧ್ಯಂತರ ಬಜೆಟ್ ಕೂಡ ಸೇರಿವೆ.
ಜನವರಿ 31ರಂದು ಬಜೆಟ್ ಅಧಿವೇಶನ ಆರಂಭ; ರಾಷ್ಟ್ರಪತಿ ಭಾಷಣ
ಬಜೆಟ್ಗೆ ಒಂದು ದಿನ ಮೊದಲು ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಬಜೆಟ್ ಅಧಿವೇಶನ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲ ಹಂತವು ಜನವರಿ 31, ಶುಕ್ರವಾರ ಆರಂಭವಾಗುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಫೆಬ್ರುವರಿ 13ರವರೆಗೂ ಮೊದಲ ಹಂತದ ಬಜೆಟ್ ಸೆಷನ್ ಮುಂದುವರಿಯುತ್ತದೆ..
ಎರಡನೇ ಹಂತದ ಬಜೆಟ್ ಅಧಿವೇಶನ ಮಾರ್ಚ್ 10ರಂದು ಆರಂಭವಾಗಿ ಏಪ್ರಿಲ್ 4ರವರೆಗೂ ನಡೆಯುತ್ತದೆ. ಈ ವೇಳೆ, ಬಜೆಟ್ ಮೇಲಿನ ಚರ್ಚೆಗಳು ನಡೆಯಲಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 31ರಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲಿಂದ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಕ್ಕುತ್ತದೆ.
ಜನವರಿ 31ರಂದು ಆರ್ಥಿಕ ಸಮೀಕ್ಷೆ…
ಬಜೆಟ್ನ ಮುಂಚೆ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಾಗುತ್ತದೆ. ವಾಡಿಕೆಯಂತೆ ಬಜೆಟ್ ಹಿಂದಿನ ದಿನವಾದ ಜನವರಿ 31ರಂದು ಆರ್ಥಿಕ ಸಮೀಕ್ಷೆಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರ ನೇತೃತ್ವದಲ್ಲಿ ಸಿದ್ದಗೊಳ್ಳುವ ಈ ವರದಿಯನ್ನು ಹಣಕಾಸು ಸಚಿವರೇ ಸಂಸತ್ತಿನಲ್ಲಿ ಪ್ರಸ್ತುತಪಡಿಸುತ್ತಾರೆ.
ಈ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಈಗಿನ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದನ್ನು ಅವಲೋಕಿಸಲಾಗುತ್ತದೆ. ಆರ್ಥಿಕತೆಯ ಬಲಗಳೇನು, ದೌರ್ಬಲ್ಯಗಳೇನು ಎಂಬಿತ್ಯಾದಿ ಅಂಶಗಳನ್ನು ಪ್ರಸ್ತಾಪಿಸಲಾಗುತ್ತದೆ.