ಭಟ್ಕಳ: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಭಟ್ಕಳ ಹಾಗೂ ಜಾಲಿ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಕ್ರೀಡಾಂಗಣದಲ್ಲಿ 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
ಆಚರಿಸಲಾಯಿತು. ಧ್ವಜಾರೋಹಣವನ್ನು ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ನೆರವೇರಿಸಿದರು.
ನಂತರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯನ್ನು ತ್ಯಾಗ ಬಲಿದಾನಗಳ ಕಾರಣಗಳಿಂದಾಗಿ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾಗಿರುವ ಸ್ವಾತಂತ್ರ್ಯ ಭಾರತಕ್ಕಾಗಿ ಕಾರಣೀಭೂತರಾಗಿರುವವರಿಗೆ ಗೌರವ ಅರ್ಪಿಸುವ ಸುದಿನವಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆ ಪ್ರತಿ ಮನೆ, ಸರ್ಕಾರಿ ಕಚೇರಿ, ಸರ್ಕಾರೇತರ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಪುರಾತತ್ವ ಇಲಾಖೆಯ 150 ಸ್ಮಾರಕದ ಮೇಲೆ ತ್ರಿವರ್ಣ ಧ್ವಜದ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿವೆ ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ಈ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ವಿಶೇಷ ಹಾಗೂ ಅದ್ಭುತವಾಗಿದ್ದು, ಹರ್ ಘರ್ ತಿರಾಂಗ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಅದೇ ರೀತಿ 120 ಕೋಟಿಗೂ ಅಧಿಕ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶದ ಮೇಲೆ ಪ್ರೀತಿಯನ್ನು ತೋರಿಸಿದ್ದಾರೆ ಎಂದರು.
ಇದಕ್ಕೂ ಪೂರ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಬಳಿಕ ನೆರೆಹಾವಳಿ ಸಂದರ್ಭದಲ್ಲಿ ಶ್ರಮಿಸಿದ ನೂಡಲ್ ಅಧಿಕಾರಿಗಳಿಗೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಾಲೂಕಾ ಆಡಳಿತವತಿಯಿಂದ ಸನ್ಮಾನಿಸಿ ಗೌರವಿಸಿದರು.