
ಹೊನ್ನಾವರದ ಶರಾವತಿ ಸೇತುವೆ ಮೇಲೆ ಬೈಕ್ ಮತ್ತು ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಕುಳಿತಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ಯುವತಿ ಹಳದಿಪುರ ಅಪ್ಪಿಕೇರಿಯ ಪೂಜಾ ಪ್ರಭಾಕರ ಗೌಡ ಎಂದು ಗುರುತಿಸಲಾಗಿದೆ. ಯುವಕ ಯುವತಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಶರಾವತಿ ಸೇತುವೆ ಮೇಲೆ ಅಪಘಾತ ನಡೆದಿದೆ. ಬೈಕ್ ಸವಾರ ಸುರೇಶ ಗಣಪು ಗೌಡ ಅವರಿಗು ಗಾಯನೋವಾಗಿದೆ. ಅಪಘಾತದಲ್ಲಿ ಬೈಕ್ ಜಖಂಗೊಂಡಿದ್ದು, ಕಾರ್ ಮುಂಭಾಗಕ್ಕೆ ಹಾನಿಯಾಗಿದೆ. ಕಾರ್‌ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ…
ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ, ಗಾಯಾಳುಗಳನ್ನು ತಾಲೂಕಾಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಟೊಯಿಂಗ್ ವಾಹನದ ಮೂಲಕ ಅಪಘಾತವಾದ ವಾಹನವನ್ನು ಠಾಣೆಗೆ ಕೊಂಡೊಯ್ದು, ಸಂಚಾರ ಸುಗಮಗೊಳಿಸಿದರು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಲದಿನಗಳ ಹಿಂದಷ್ಟೆ ಇದೇ ಸ್ಥಳದಲ್ಲಿ ಕೆ ಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದು ಮೂವರು ಯುವಕರು ಅಪಘಾತದಲ್ಲಿ ಮೃತಪಟ್ಟಿದ್ದ ಧಾರುಣ ಘಟನೆ ನಡೆದಿತ್ತು. ಇಂದು ಸಹ ಅದೇ ಸ್ಥಳದಲ್ಲಿ ಮತ್ತೆ ಅಪಘಾತ ಮರುಕಳಿಸಿದ್ದು, ಅಲ್ಲದೇ ಈ ಹಿಂದಿನ ಹಲವಾರು ಅಪಘಾತಗಳು ಅವಲೋಕಿಸಿದರೆ ಶರಾವತಿ ಸೇತುವೆಯು ಅಪಘಾತ ವಲಯವಾಗಿ ಮಾರ್ಪಟ್ಟಂತಾಗಿದೆ…