ಐತಿಹಾಸಿಕ ಸಮಾವೇಶ – ಬೆಳಗಾವಿ ಸುವರ್ಣಸೌಧದ ಎದುರು ಗಾಂಧಿ ಪ್ರತಿಮೆ ಲೋಕಾರ್ಪಣೆ

ಬೆಳಗಾವಿ: ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ‌ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಬೃಹತ್ ಪ್ರತಿಮೆಯನ್ನಿಂದು ಮಂಗಳವಾರ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚರಕ ತಿರುಗಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಇದೇ ವೇಳೆ ಗದಗ ಗ್ರಾಮೀಣ ವಿವಿಗೆ ʻಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿವಿʼ ಎಂದು ಮರು ನಾಮಕರಣ ಮಾಡಲಾಯಿತು. ಜೊತೆಗೆ ʻಗಾಂಧಿ ಭಾರತʼ ವಿಶೇಷ ಸ್ಟಾಂಪ್ ಸಹ ಬಿಡುಗಡೆಗೊಳಿಸಲಾಯಿತು.

ಸಮಾರಂಭದಲ್ಲಿ ಕಾಂಗ್ರೆಸ್ ನಾಯಕಿ, ಲೋಕಸಭೆ ಸದಸ್ಯೆ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರ್ನಾಟಕ ವಿಧಾನ‌ಸಭೆ ಸಭಾಧ್ಯಕ್ಷ ಯು.ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪಾಲ್ಗೊಂಡಿದ್ದರು.

ಈ ವೇಳೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ, ಲೊಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಸ್ವಾತಂತ್ರ್ಯ ಹೋರಾಟಗಾರರು, ಯೋಧರು ಹಾಗೂ ಅವರ‌ ಕುಟುಂಬಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶ್ರೀರಾಮನಂತ ಮಗ ಇರಬೇಕು:
ಪ್ರತಿಮೆ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಗಾಂಧೀಜಿ ಹೇಳಿದ ಹೇಳಿದ ರಾಮರಾಜ್ಯ ಹಾಗೂ ಗ್ರಾಮ ರಾಜ್ಯ ಆಗಬೇಕಾದರೆ, ಪ್ರತಿ ಮನೆಯಲ್ಲಿ ತಂದೆಯ ಮಾತಿಗೆ ಕಟ್ಟು ಬಿದ್ದು ಎಲ್ಲಾ ಸೌಕರ್ಯ ಬಿಟ್ಟು ಕಾಡಿಗೆ ಹೊರಟ ಶ್ರೀ ರಾಮನಂತ ಮಗ ಇರಬೇಕು. ಎಲ್ಲ ಸುಖ ತೊರೆದು ಅಣ್ಣನ ಜೊತೆ ಕಾಡಿಗೆ ಹೊರಟ ಲಕ್ಷ್ಮಣ ನಂತ ಸಹೋದರ ಇರಬೇಕು. ಕಷ್ಟವಾದರೂ ನನ್ನ ಪತಿಯ ಜೊತೆ ಹೋಗುತ್ತೇನೆ ಎಂದು ಹೊರಟ ಸೀತಾ ಮಾತೆಯಂತ ಮಡದಿ ಇರಬೇಕು. ರಾಮನ ಪಾದುಕೆ ಇಟ್ಟು ಪೂಜಿಸಿದ ಭರತನಂತ ಸಹೋದರನಿರಬೇಕು. ಆಗ ದೇಶ ʻಗ್ರಾಮ ರಾಜ್ಯ – ರಾಮ ರಾಜ್ಯʼ ಎರಡೂ ಆಗಲಿದೆ ಎಂದು ನುಡಿದರು.