
ನಟಿ ಉಮಾಶ್ರೀ ಅವರು ಬಣ್ಣದ ಲೋಕಕ್ಕೆ ಹೊಸಬರಲ್ಲ. ಅವರಿಗೆ ಹಲವು ದಶಕಗಳ ಅನುಭವ ಇದೆ. ನಾನಾ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಕ್ಷಗಾನದಲ್ಲಿ ನಟಿಸಿದ್ದಾರೆ. ಅದೂ ರಾಮಚಂದ್ರ ಚಿಟ್ಟಾಣಿಯವರ ಆಸೆ ಈಡೇರಿಸಲು. ಹೊನ್ನಾವರದಲ್ಲಿ ನಡೆದ ಯಕ್ಷಗಾನದಲ್ಲಿ ಅವರು ಮಂತರೆಯ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಸುಬ್ರಮಣ್ಯ ಚಿಟ್ಟಾಣಿಯವರು ಬಂದು ಯಕ್ಷಗಾನ ಮಾಡಲು ಕೋರಿದರು. ನಾನು ಇದನ್ನು ಎಂದಿಗೂ ಮಾಡಿಲ್ಲ. ಕಷ್ಟ ಆಗುತ್ತದೆ, ಮಾಡುವುದಿಲ್ಲ ಎಂದೆ. ರಾಮಚಂದ್ರ ಚಿಟ್ಟಾಣಿಯವರು ನನ್ನ ಬಳಿ ಮಂತರೆಯ ಪಾತ್ರ ಮಾಡಿಸಬೇಕು ಎಂದು ಹೇಳಿದ್ದರಂತೆ. ಈ ಮಾತನ್ನು ಸುಬ್ರಮಣ್ಯ ಚಿಟ್ಟಾಣಿಯವರು ನನಗೆ ಹೇಳಿದರು. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಮಾಡಿದೆ’ ಎಂದಿದ್ದಾರೆ ಉಮಾಶ್ರೀ.