ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಪ್ರಯುಕ್ತ ಸಾಧನೆ ಮಾಡಿದ 75 ಜನರಿಗೆ ಸನ್ಮಾನ

ಶಿರಸಿ: ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 75 ಜನರನ್ನು ಸನ್ಮಾನಿಸಲಾಯಿತು.

ಸಹಾಯಕ ಆಯುಕ್ತ ದೇವರಾಜ ಆರ್. ಧ್ವಜಾರೋಹಣ ನೆರವೇರಿಸಿ‌ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ‌ ಮಹನೀಯರ ತ್ಯಾಗವನ್ನು ಪ್ರತಿ ಪ್ರಜೆ ನೆನಪಿನಲ್ಲಿಟ್ಟುಕೊಳ್ಳಬೇಕು. ಇಡೀ ಜಗತ್ತು ಮಲಗಿದ್ದಾಗ ಭಾರತ ಸ್ವಾತಂತ್ರ್ಯ ಪಡೆದುಕೊಂಡು ಎದ್ದು ನಿಂತಿತ್ತು. ಈಗ ದೇಶ ತಲೆ ಎತ್ತಿ ನಿಂತಿದೆ. ಮಹಾತ್ಮರ ಕೊಡುಗೆ, ಬಲಿದಾನದ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು. ಜನರು ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ರಾಷ್ಟ್ರ ನಾಯಕರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು ಎಂದರು.

ಈ ವೇಳೆ ಹದಿನಾಲ್ಕು ತಂಡಗಳು ಪಥಸಂಚಲನ ನಡೆಸಿದವು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್, ಡಿಎಸ್ಪಿ ರವಿ ನಾಯ್ಕ, ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕೇಶವ ಚೌಗುಲೆ, ತಾಲ್ಲುಕುಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.