ಹಸುವಿನ ಕೆಚ್ಚಲು ಕೊಯ್ದು ಸಂಕ್ರಾಂತಿಗೆ ಗಿಫ್ಟ್ ಕೊಟ್ಟಿದ್ದಾರೆ: ಸರ್ಕಾರದ ವಿರುದ್ಧ ಅಶೋಕ್ ಕಿಡಿ

ಬೆಂಗಳೂರು/ಧಾರವಾಡ (ಜನವರಿ 12): ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವ ಘಟನೆಗೆ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೋ ಪೂಜೆ ಬಹಳ ಪವಿತ್ರ. ಸಂಕ್ರಾಂತಿಗೆ ಸಂಭ್ರಮ ಇರುತ್ತದೆ. ಕಾಂಗ್ರೆಸ್ (Congress) ಸರ್ಕಾರ ಬಂದಮೇಲೆ ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ. ಜಿಹಾದಿ ಮನಸ್ಥಿತಿ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಹಸುವಿನ ಮಾಲೀಕ ಆರ್‌ಎಸ್‌ಎಸ್ ಕಾರ್ಯಕರ್ತ. ಸ್ಥಳೀಯ ಪಶು ಆಸ್ಪತ್ರೆ ಉಳಿವಿಗಾಗಿ ಹಸುವಿನ ಮಾಲೀಕರು ಹೋರಾಟ ಮಾಡಿದರು. ಹಸುಗಳನ್ನ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು ಎಂಬುದಕ್ಕೆ ಕಾಲು ಕಟ್ ಮಾಡಿದ್ದಾರೆ. ಕೆಚ್ಚಲಿಗೆ ಹಾನಿ ಮಾಡಿದ್ದಾರೆ. ಕಾಂಗ್ರೆಸ್ ಮಾತೆತ್ತಿದರೆ ದೇವಸ್ಥಾನ, ಹೋಮ ಮಾಡುತ್ತಾರೆ. ಇದು ವೋಟ್‌ಗಾಗಿ ಮಾಡುತ್ತಿರುವುದು ಎಂದು ಕಿಡಿಕಾರಿದರು.

ಹಿಂದೂಗಳನ್ನು ಭಯಭೀತರನ್ನಾಗಿ ಮಾಡುವ ಉದ್ದೇಶ ಇದು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಣೆ ಮಾಡುತ್ತೇವೆ. ಸಿಸಿಟಿವಿಗಳನ್ನು ಒಡೆದು ಹಾಕಿದ್ದಾರಂತೆ. ಪಶು ಆಸ್ಪತ್ರೆ ಉಳಿವಿಗಾಗಿ ಹೋರಾಟ ಮಾಡಿದ ಹಸುಗಳ ಮಾಲೀಕರಿಗೆ ಭಯ ಶುರುವಾಗಿದೆ.ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಗೌರವ ಇದೆಯಾ ಇವ್ರಿಗೆ? ಸ್ಥಳೀಯ ಶಾಸಕರು ಬಂದಿಲ್ಲ ಎಂದು ಹರಿಹಾಯ್ದರು.

ಅಸೆಂಬ್ಲಿಯಲ್ಲಿ ಈ ಬಗ್ಗೆ ಮಾತನಾಡಿದ್ದೆ. ಹಾಗಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ವೈಯಕ್ತಿಕವಾಗಿ ನಾನು ಸಹಾಯ ಮಾಡುತ್ತೇನೆ. ಪಶು ಆಸ್ಪತ್ರೆ ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಅದನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ದೆವು. ಕೋಟ್ಯಂತರ ರೂ. ಬೆಲೆ ಬಾಳುವ ಆಸ್ಪತ್ರೆ, ಪಶು ಆಸ್ಪತ್ರೆಯಾಗಿಯೇ ಉಳಿಬೇಕು. ಆದರೆ ಇದನ್ನು ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಕೋರ್ಟ್‌ನಲ್ಲಿ ಪ್ರಕರಣ ಇದೆ. ಇದಕ್ಕೆ ನಾವು ತಡೆಯಾಜ್ಞೆ ಕೂಡ ತಂದಿದ್ದೇವೆ. ಅಷ್ಟರಲ್ಲಿ ಹೀಗೆ ಆಗಿದೆ. ಹೋರಾಟಗಾರರಿಗೆ ಭಯ ಪಡಿಸುವ ಕೆಲಸ ಆಗಿದೆ ಎಂದು ವಾಗ್ದಾಳಿ ನಡೆಸಿದರು

ಸಚಿವ ಜಮೀರ್​​ಗೆ ​​ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಾಲ್ಕು ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಇದು ನೀಚ ಕೃತ. ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ಆಗುತ್ತಿದೆ, ರಾಕ್ಷಸ ಕೃತ್ಯಕ್ಕೆ ಇದು ಉದಾಹರಣೆ. ಜಮೀರ್ ಅಹ್ಮದ್ ಇದು ನಿಮ್ಮ ಕ್ಷೇತ್ರದಲ್ಲಿ ಆಗಿದೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್​ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿದ್ದಾರೆ.

ಈ ಕುರಿತು ಧಾರವಾಡದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಅದು ಬರೀ ಪ್ರಾಣಿ ಅಲ್ಲಾ, ಅದು ನಮಗೆ ಅನ್ನ ಹಾಕುತ್ತೆ, ಗೊಬ್ಬರ ಕೊಡುತ್ತೆ, ಔಷಧಿ ಕೊಡುತ್ತದೆ. ರೈತರ ಬೆನ್ನೆಲುಬು ಅದು. ಅದರ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ಜಮೀರ್ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ, ಇದು ಎಚ್ಚರಿಕೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದೆ. ಕಾನೂನು ಇದ್ದರೂ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ಹಿನ್ನೆಲೆಯಲ್ಲಿ ನಿರಂತರ ಗೋಹತ್ಯೆ ಆಗುತ್ತಿದೆ. ನಿರಂತರ ಕಸಾಯಿ ಖಾನೆಗೆ ಹಸು ಹೋಗುತ್ತಿವೆ. ಇವತ್ತು ಅದನ್ನು ತಡೆಯಬೇಕು. ಇವತ್ತು ಆದ ಘಟನೆ ನೋಡಲು ಆಗುತ್ತಿಲ್ಲ. ಅದು ನಮ್ಮ ತಾಯಿ. ಜಮೀರ್‌ಗೆ ಮಾನಾ ಮರ್ಯಾದೆ ಇದ್ದರೇ ರಾಕ್ಷಸಿ ಕೃತ್ಯ ಮಾಡಿದವರನ್ನು ಒದ್ದು ಒಳಗೆ ಹಾಕಿ. ಇಲ್ಲದಿದ್ದರೇ ಹೋರಾಟಕ್ಕೆ ಸಿದ್ದ ಎಂದು ಸವಾಲು ಹಾಕುತ್ತೇನೆ ಎಂದು ಗುಡುಗಿದರು.

ಆಕಳಿನ ಕೆಚ್ಚಲು ಕೊಯ್ದದ್ದನ್ನು ನೋಡಿದರೆ ಮನುಷ್ಯ ನೋಡಿ ಸುಮ್ಮನೆ ಇರಲು ಆಗಲ್ಲ. ಇದನ್ನು ಖಂಡಿಸುತ್ತೇನೆ. ನಿಮ್ಮ ಒಳಗೆ ಇರುವ ಬಾಂಗ್ಲಾದೇಶದವರ ಕುಕೃತ್ಯಕ್ಕೆ ಉತ್ತರ ನೀವೇ ಕೊಡಬೇಕು. ನೀವೇ ಒದ್ದು ಒಳಗೆ ಹಾಕಬೇಕು. ಆ ಕ್ಷೇತ್ರದ ಸಚಿವರು ನೀವು, ಅದು ನಿಮ್ಮ ಜವಾಬ್ದಾರಿ. ಹಿಂದೂ ಜನ ನಿಮಗೆ ವೋಟು ಹಾಕಿದ್ದಾರೆ. ಆ ಹಿಂದೂಗಳಿಗೆ ನ್ಯಾಯ ಒದಗಿಸಬೇಕಾದರೆ ಅವರನ್ನು ಬಂಧಿಸಿ. ನಮ್ಮ ತೇಜಸ್ವಿಗೌಡ ಬೆಳಗ್ಗೆಯಿಂದ ಅಲ್ಲೇ ಇದ್ದಾರೆ. ಪೊಲೀಸರು ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.