ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ತಾಲೂಕು ಆಡಳಿತದಿಂದ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಉಪವಿಭಾಗಾಧಿಕಾರಿ ರಾಘವೇಂದ್ರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಶುಭ ಸಂದೇಶ ನೀಡಿದರು.
ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸೋಣ. ದೇಶ ಸ್ವಾತಂತ್ರ್ಯ ಲಭಿಸಿದ 75 ವರ್ಷಗಳು ಕಳೆದಿದೆ. ಈ ಸಂದರ್ಭದಲ್ಲಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತವೂ ಕೂಡ ಬಲಿಷ್ಟ ರಾಷ್ಟ್ರಗಳ ಸಾಲಿಗೆ ಸೇರಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಸುಸಂದರ್ಭದಲ್ಲಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ನಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸೋಣ ಎಂದರು.
ಪಿಎಸ್‌ಐ ನವೀನ ನಾಯ್ಕ ನೇತೃತ್ವದ ತಂಡ ಗೌರವ ವಂದನೆ ಸಲ್ಲಿಸಿತು. ಪೊಲೀಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ನಡೆದ ಪಥ ಸಂಚಲನ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ರಾಜೇಶ ಮಡಿವಾಳ, ವೇಟ್ ಲಿಪ್ಟರ್ ವೆಂಕಟೇಶ ಪ್ರಭು ಸೇರಿದಂತೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಿಐ ತಿಮ್ಮಪ್ಪ ನಾಯ್ಕ, ತಾಪಂ ಪ್ರಭಾರಿ ಇಒ ನಾಗರತ್ನ ನಾಯಕ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್, ಸದಸ್ಯರಾದ ಸಂತೋಷ ನಾಯ್ಕ, ಬಿಇಒ ಆರ್.ಎಲ್.ಭಟ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಡಿ ನಾಯ್ಕ, ಗ್ರೇಡ್ 2 ತಹಸೀಲ್ದಾರ್ ಅಶೋಕ ಭಟ್, ಆರ್‌ಎಫ್.ಓ ಎಸ್.ಟಿ.ಪಟಗಾರ, ಸತೀಶ ಗೌಡ, ನೌಕರರು, ಶಿಕ್ಷಕರು ಇದ್ದರು. ಕಾರ್ಯಕ್ರಮದ ಬಳಿಕ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.