Australia vs India Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಜಯ ಸಾಧಿಸಿತು. ಇನ್ನು ಮೂರನೇ ಪಂದ್ಯ ಡ್ರಾ ಆಗಿತ್ತು. ಹಾಗೆಯೇ ನಾಲ್ಕನೇ ಪಂದ್ಯವನ್ನು ಆಸ್ಟ್ರೇಲಿಯಾ 184 ರನ್ಗಳಿಂದ ಗೆದ್ದುಕೊಂಡಿತ್ತು. ಇನ್ನು ಐದನೇ ಮ್ಯಾಚ್ನಲ್ಲಿ 6 ವಿಕೆಟ್ಗಳ ಜಯ ಸಾಧಿಸಿ ಆಸ್ಟ್ರೇಲಿಯಾ 3-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ಸಿಡ್ನಿ ಟೆಸ್ಟ್ ಮುಗಿಯುವುದರೊಂದಿಗೆ ಭಾರತದ ಆಸ್ಟ್ರೇಲಿಯಾ ಪ್ರವಾಸವೂ ಅಂತ್ಯಗೊಂಡಿದೆ. ಇದಾಗ್ಯೂ ಟೀಮ್ ಇಂಡಿಯಾ ಭಾರತಕ್ಕೆ ಮರಳಿಲ್ಲ ಎಂಬುದು ವಿಶೇಷ. ಇದಕ್ಕೆ ಮುಖ್ಯ ಕಾರಣ ಭಾರತ ತಂಡವು 5ನೇ ಟೆಸ್ಟ್ ಪಂದ್ಯವನ್ನು ಕೇವಲ 3 ದಿನಗಳಲ್ಲಿ ಮುಗಿಸಿರುವುದು. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪಂದ್ಯ ಮುಗಿದಿದ್ದರಿಂದ ಇದೀಗ ಭಾರತೀಯ ಆಟಗಾರರಿಗೆ ವಿಮಾನದ ಟಿಕೆಟ್ ಸಿಗುತ್ತಿಲ್ಲ.
ಇತ್ತ ಟೀಮ್ ಇಂಡಿಯಾದ ಟಿಕೆಟ್ ಬುಕ್ ಆಗಿದದ್ದು ಜನವರಿ 8 ರಂದು. ಜನವರಿ 5 ರಂದು ಪಂದ್ಯ ಮುಗಿದಿದ್ದರಿಂದ ಭಾರತೀಯ ಆಟಗಾರರು ಬೇಗನೆ ಹೊರಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಟಿಕೆಟ್ ಲಭ್ಯವಿಲ್ಲದ ಕಾರಣ ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳಬೇಕಾಗಿ ಬಂದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಭಾರತೀಯ ಆಟಗಾರರಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ‘ಲಾಜಿಸ್ಟಿಕ್ಸ್ ಮ್ಯಾನೇಜರ್ ತಂಡಕ್ಕಾಗಿ ಈ ಕೆಲಸ ಮಾಡುತ್ತಿದ್ದು, ಟಿಕೆಟ್ ಲಭ್ಯವಾದಾಗಲೆಲ್ಲಾ ಭಾರತೀಯ ಆಟಗಾರರು ಹೊರಡುತ್ತಾರೆ’ ಎಂದು ಮೂಲವೊಂದು ತಿಳಿಸಿದೆ. ಹೀಗಾಗಿ ಕೆಲವು ಆಟಗಾರರು ಮೊದಲು ಮತ್ತು ಇನ್ನು ಕೆಲ ಆಟಗಾರರು ನಂತರ ಭಾರತಕ್ಕೆ ಮರಳುವ ಸಾಧ್ಯತೆಯೂ ಇದೆ.
ಒಂದೂವರೆ ತಿಂಗಳ ಪ್ರವಾಸ:
ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ತೆರಳಿ ಒಂದೂವರೆ ತಿಂಗಳಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ನವೆಂಬರ್ 22 ರಿಂದ ಶುರುವಾಗಿತ್ತು. ಇದಕ್ಕೂ ಕೆಲವು ದಿನಗಳ ಮುಂಚೆಯೇ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ವಿಮಾನ ಏರಿತ್ತು.
ವಿರಾಟ್ ಕೊಹ್ಲಿ ನವೆಂಬರ್ 10 ರಂದು ಆಸ್ಟ್ರೇಲಿಯಾಕ್ಕೆ ತೆರಳಿದರೆ, ಅದಕ್ಕಿಂತ ಮುಂಚಿತವಾಗಿ ಕೆಎಲ್ ರಾಹುಲ್ ಸಹ ಭಾರತ ಎ ತಂಡವನ್ನು ಕೂಡಿಕೊಂಡಿದ್ದರು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಂತರ ರೋಹಿತ್ ಶರ್ಮಾ ಆಸ್ಟ್ರೇಲಿಯಾ ತಲುಪಿದ್ದರು. ಹೀಗೆ ಕಳೆದೊಂದು ತಿಂಗಳಿಂದ ಕಾಂಗರೂನಾಡಿನಲ್ಲಿರುವ ಟೀಮ್ ಇಂಡಿಯಾ ಇದೀಗ ಭಾರತಕ್ಕೆ ಮರಳು ಸಜ್ಜಾಗಿ ನಿಂತಿದ್ದಾರೆ.
ಹೀನಾಯ ಸೋಲು:
ಕಳೆದ ನಾಲ್ಕು ಸರಣಿಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾರುಪತ್ಯ ಮೆರೆದಿದ್ದ ಟೀಮ್ ಇಂಡಿಯಾ ಈ ಬಾರಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. 5 ಪಂದ್ಯಗಳ ಸರಣಿಯ ಮೊದಲ ಮ್ಯಾಚ್ನಲ್ಲಿ ಗೆದ್ದಿದ್ದ ಭಾರತ ತಂಡವು, ಆ ಬಳಿಕ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನು ಒಂದು ಮ್ಯಾಚ್ ಮಳೆಗೆ ಆಹುತಿಯಾದ ಕಾರಣ ಡ್ರಾನಲ್ಲಿ ಅಂತ್ಯಗೊಂಡಿತ್ತು.
ಈ ಮೂಲಕ 3-1 ಅಂತರದಿಂದ ಸರಣಿ ಸೋತಿರುವ ಭಾರತ ತಂಡದ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿಯಾಗುವುದು ಖಚಿತ ಎನ್ನಬಹುದು.