ಮುರ್ಡೇಶ್ವರದಲ್ಲಿ ಗೂಡಂಗಡಿ ಕಿರಿಕಿರಿ : ಪೊಲೀಸ್ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ.

ಭಟ್ಕಳ : ಮುರ್ಡೇಶ್ವರ ಕಡಲತೀರದಲ್ಲಿನ ಅನಧಿಕೃತ ಗೂಡಂಗಡಿಗಳನ್ನ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಗಿದೆ.

ಇಂದು ಬೆಳ್ಳಂಬೆಳಿಗ್ಗೆ ಅಧಿಕಾರಿಗಳು ಗೂಡಂಗಡಿಗಳನ್ನ ತೆಗೆಯುತ್ತಿದ್ದಾರೆ. ಸಿಆರ್ ಝಡ್ ಉಲ್ಲಂಘನೆ ಮೇಲೆ ಗೂಡಂಗಡಿ ತೆರವುಗೊಳಿಸಲಾಗುತ್ತಿದೆ. ಕಳೆದ ಕೆಲ ತಿಂಗಳಿಂದ ಸುಮಾರು 60 ಅಂಗಡಿಗಳು ಕಡಲ ತೀರದ ಎದುರು ಸ್ಥಳೀಯರು ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಸ್ಥಳೀಯರ ಮನವಿ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶ ಮಾಡಿಕೊಟ್ಟಿದ್ದರು. ಆದರೀಗ ಅಧಿಕಾರಿಗಳು ಮತ್ತು ಪೊಲೀಸರು ತೆರವುಗೊಳಿಸುತ್ತಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಕೋಲಾರ ಮೂಲದ ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು. ಇದಾದ ಬಳಿಕ ಕಡಲತೀರ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು. ನಂತರ ಅಧಿಕಾರಿಗಳ ಸಭೆ ನಡೆಸಿ ಕಡಲತೀರ ಸುರಕ್ಷತೆ ದೃಷ್ಟಿಯಿಂದ ಕೆಲವೊಂದು ಮಾರ್ಪಾಡುಗಳನ್ನ ಮಾಡಲು ಯೋಜಿಸಲಾಗಿದೆ. ಹೀಗಾಗಿ ಪ್ರವಾಸಿಗರಿಗೆ ಬೀಚ್ ಓಪನ್ ಮಾಡುತ್ತಿರುವ ಹಿನ್ನಲೆಯಲ್ಲಿ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ.