ಹತ್ತು ವರ್ಷದ ಬಾಲಕ 140 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. bAlk 39 ಅಡಿ ಆಳದಲ್ಲಿ ಸಿಲುಕಿದ್ದಾನೆ. ಅನೇಕ ತಂಡಗಳನ್ನು ಒಳಗೊಂಡ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಶನಿವಾರ ರಾತ್ರಿಯಿಂದ ಆತನನ್ನು ರಕ್ಷಿಸುವ ಪ್ರಯತ್ನ ಮುಂದುವರೆದಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಪೊಲೀಸರ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ರಕ್ಷಣಾ ತಂಡಗಳು 40 ಅಡಿಗಳವರೆಗೆ ಸಮಾನಾಂತರ ಹೊಂಡವನ್ನು ಅಗೆದು ಬಾಲಕನನ್ನು ಉಳಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ ಎಂದು ಡಿಸಿ ಸತ್ಯೇಂದ್ರ ಸಿಂಗ್ ತಿಳಿಸಿದ್ದಾರೆ. ಮಗುವನ್ನು ಸುರಕ್ಷಿತವಾಗಿಡಲು ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ.
ರಾಜಸ್ಥಾನದಲ್ಲಿ ಇಂಥದ್ದೇ ಘಟನೆ ನಡೆದಿತ್ತು ಮನೆಯ ಹೊರಗೆ ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣುಮಗು ಅಲ್ಲೇ ಇದ್ದ 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಚೇತನಾ ಎಂಬ ಮಗು ಆರಂಭದಲ್ಲಿ 15 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು ಆದರೆ ನಂತರ ಮತ್ತಷ್ಟು ಕೆಳಗೆ ಜಾರಿದ್ದಳು.
ರಕ್ಷಣಾ ತಂಡವು ಪೈಪ್ ಮೂಲಕ ಆಕೆಗೆ ಆಮ್ಲಜನಕವನ್ನು ಒದಗಿಸಿತು ಮತ್ತು ಆಕೆಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕ್ಯಾಮರಾವನ್ನು ಅಳವಡಿಸಿದ್ದಾರೆ. ಚೇತನಾಳ ಅಕ್ಕ ಕಾವ್ಯಾ ತಂಗಿ ಬಿದ್ದಿದ್ದನ್ನು ನೋಡಿ ತಕ್ಷಣವೇ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಕೂಡಲೇ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳೀಯ ಆಡಳಿತದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೆಸಿಬಿ ಯಂತ್ರದ ಸಹಾಯದಿಂದ ಬೋರ್‌ವೆಲ್ ಬಳಿ ಅಗೆಯುವ ಕಾರ್ಯ ಆರಂಭವಾಗಿದೆ. ಸಿಕ್ಕಿಬಿದ್ದ ಮಗುವಿಗೆ ಆಹಾರ ಪೂರೈಸುವ ಪ್ರಯತ್ನವೂ ನಡೆಯುತ್ತಿದೆ. ಘಟನೆ ವೇಳೆ ಕುಟುಂಬದ ಸದಸ್ಯರು ಮನೆಯೊಳಗಿದ್ದರು. ಬಳಿಕ ಬಾಲಕಿಯನ್ನು ರಕ್ಷಿಸಲಾಯಿತಾದರೂ ಬದುಕುಳಿಯಲಿಲ್ಲ.