ಜಸ್​ಪ್ರೀತ್ ಬುಮ್ರಾ ಬೆಂಕಿ ಬೌಲಿಂಗ್: 147 ವರ್ಷಗಳ ಇತಿಹಾಸದಲ್ಲೇ ಹೊಸ ದಾಖಲೆ

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್ ಕಬಳಿಸಿದ್ದ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ, ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ ಮತ್ತೆ 4* ವಿಕೆಟ್ ಉರುಳಿಸಿದ್ದಾರೆ. ಈ 8 ವಿಕೆಟ್​ಗಳೊಂದಿಗೆ ಬುಮ್ರಾ ಟೆಸ್ಟ್​ ಕ್ರಿಕೆಟ್​ನಲ್ಲಿ 200* ವಿಕೆಟ್​​ಗಳನ್ನು ಪೂರೈಸಿದ್ದಾರೆ.

ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಅವರೇಜ್​ನಲ್ಲಿ 200 ವಿಕೆಟ್ ಕಬಳಿಸಿದ ಬೌಲರ್​ ಎಂಬ ವಿಶ್ವ ದಾಖಲೆಯನ್ನು ಜಸ್​ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ಈವರೆಗೆ 44 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ 8494* ಎಸೆತಗಳನ್ನು ಎಸೆದಿದ್ದು ಈ ಮೂಲಕ ಒಟ್ಟು 202* ವಿಕೆಟ್ ಕಬಳಿಸಿದ್ದಾರೆ.

ಅದು ಕೂಡ ಕೇವಲ 19.38 ರನ್ ಸರಾಸರಿಯಲ್ಲಿ ಎಂಬುದು ವಿಶೇಷ. ಈ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ 20 ಕ್ಕಿಂತ ಕಡಿಮೆ ಅವರೇಜ್​ನಲ್ಲಿ 200 ವಿಕೆಟ್ ಕಬಳಿಸಿದ ವಿಶ್ವದ ಏಕೈಕ ಬೌಲರ್ ಎಂಬ ಹೊಸ ದಾಖಲೆಯನ್ನು ಜಸ್​ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ವೆಸ್ಟ್ ಇಂಡೀಸ್​ನ ಜೋಯಲ್ ಗಾರ್ನರ್ 20.34 ರ ಸರಾಸರಿಯಲ್ಲಿ 200 ವಿಕೆಟ್ ಕಬಳಿಸಿದ್ದು ಟೆಸ್ಟ್​ನಲ್ಲಿ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸುವಲ್ಲಿ ಜಸ್​ಪ್ರೀತ್ ಬುಮ್ರಾ ಯಶಸ್ವಿಯಾಗಿರುವುದು ವಿಶೇಷ.

ಇದೀಗ ಟೆಸ್ಟ್ ಕ್ರಿಕೆಟ್​ನಲ್ಲಿ 85 ಇನಿಂಗ್ಸ್​​ಗಳಲ್ಲಿ 1415* ಓವರ್​ಗಳನ್ನು ಎಸೆದಿರುವ ಜಸ್​ಪ್ರೀತ್ ಬುಮ್ರಾ ಒಟ್ಟು 202* ವಿಕೆಟ್ ಕಬಳಿಸಿದ್ದು, ಈ ಮೂಲಕ 200+ ವಿಕೆಟ್ ಪಡೆದ ಭಾರತದ 12ನೇ ಬೌಲರ್​​ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 82ನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.