ಕಾರವಾರ ಡಿಸೆಂಬರ್ 16 : ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ ಅಗಲಿಕೆ ತೀವ್ರ ನೋವು, ಆಘಾತವನ್ನು ಉಂಟುಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಶ್ರೀಮತಿ ತುಳಸಿ ಗೌಡ ಅವರನ್ನು ನಾನು ರವಿವಾರ ಸಂಜೆ ಭೇಟಿ ಮಾಡಿ ಕೆಲ ಸಮಯ ಅವರೊಂದಿಗಿದ್ದು, ಅವರ ಕುಟುಂಬದವರೊಂದಿಗೆ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೆ. ಕುಟುಂಬದವರೊಂದಿಗೆ ನಾನಿರುವುದಾಗಿ ಧೈರ್ಯ ತುಂಬಿದ್ದೆ. ಶೀಘ್ರದಲ್ಲಿ ಚೇತರಿಸಿಕೊಳ್ಳುವಂತಾಗಲಿ ಎಂದು ಪ್ರಾರ್ಥಿಸಿದ್ದೆ. ಸೋಮವಾರ ಅವರ ನಿಧನರಾದ ಸುದ್ದಿ ತಿಳಿದು ತೀವ್ರ ನೋವು ಉಂಟಾಯಿತು.
ಹಾಲಕ್ಕಿ ಸಮಾಜದ ನಮ್ಮೆಲ್ಲರ ಹೆಮ್ಮೆಯ ತುಳಸಿ ಗೌಡ ನಮ್ಮ ಕ್ಷೇತ್ರ, ರಾಜ್ಯ ಹಾಗೂ ರಾಷ್ಟ್ರದ ಅನರ್ಘ್ಯ ರತ್ನ. ಬಡತನದ ಬದುಕಿನಲ್ಲೂ ವೃಕ್ಷಪ್ರೇಮ ಮೆರೆದು ಪರಿಸರವನ್ನು ಶ್ರೀಮಂತಗೊಳಿಸಿದ ಅವರ ಅಗಲಿಕೆಯಿಂದ ನಮ್ಮೆಲ್ಲರಿಗೆ, ಪರಿಸರಕ್ಕೆ, ಈ ನಾಡಿಗೆ ತುಂಬಲಾರದ ಹಾನಿ ಉಂಟಾದಂತಾಗಿದೆ.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.