ಇಂದು ಚಂಪಾ ಷಷ್ಠಿ; ಏನಿದರ ಹಿನ್ನಲೆ?

ದೇಶಾದ್ಯಂತ ಶನಿವಾರ ಚಂಪಾ ಷಷ್ಠಿ ಸಂಭ್ರಮ. ಮಾರ್ಗಶಿರ ಮಾಸದಲ್ಲಿ ಆಚರಿಸಲಾಗುವ ಷಷ್ಠಿಯನ್ನು ಚಂಪಾ ಷಷ್ಠಿ , ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕದ ಕರಾವಳಿಯಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಚಂಪಾ ಷಷ್ಠಿಯ ದಿನದಂದು ಶಿವ ಮತ್ತು ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ. ಕರಾವಳಿ ಭಾಗದಲ್ಲಿ ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನಿಗೆ ಪೂಜೆ ಸಲ್ಲಿಸಲಾಗುತ್ತದೆ. ಕಾರ್ತಿಕೇಯನನ್ನು ಮುರುಗನ್‌, ಸ್ಕಂದ, ವೇಲನ್‌ ಕುಮಾರನ್‌.. ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.

ಕುಮಾರಧಾರ ತಟದಲ್ಲಿ ಕಾರ್ತಿಕೇಯನು ನೆಲೆಯಾದ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಹೀಗಾಗಿ ಕರಾವಳಿಯಲ್ಲಿ ಷಷ್ಠಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್‌ ತಿಂಗಳಲ್ಲಿ ಆಚರಿಸಲಾಗುವ ಷಷ್ಠಿ ಹಿಂದೂಗಳಿಗೆ ಅದರಲ್ಲೂ ಮುಖ್ಯವಾಗಿ ತುಳುನಾಡಿನ ಜನತೆಗೆ ಪ್ರಮುಖ ಹಬ್ಬವೂ ಹೌದು. ಚಂಪಾ ಷಷ್ಠಿಯ ತಿಥಿ ಡಿಸೆಂಬರ್ 6ರಂದು ರಾತ್ರಿ 12.07ಕ್ಕೆ ಪ್ರಾರಂಭವಾಗಿ 7ರಂದು ಬೆಳಗ್ಗೆ 11.05ರವರೆಗೆ ಇರಲಿದೆ.

ಚಂಪಾ ಷಷ್ಠಿಯ ಹಿನ್ನೆಲೆ ಏನು?

ಮಹಾಮುನಿ ಋಷಿ ಕಶ್ಯಪರ ಹದಿಮೂರು ಪತ್ನಿಯರಲ್ಲಿ ಕದ್ರು ಮತ್ತು ವಿನುತಾ ಎಂಬವರಿದ್ದರು. ಕದ್ರು ತನ್ನ ಸಹೋದರಿ ವಿನುತಾಳನ್ನು ಮೋಸದಿಂದ ದಾಸಿಯನ್ನಾಗಿ ಮಾಡಿಕೊಂಡಿರುತ್ತಾಳೆ. ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯ ಪಡೆದಿರುತ್ತಾಳೆ. ವಿನುತಾಳ ಮಗ ಗರುಡ. ಈ ವಿಷಯ ತಿಳಿದರೂ ತಾಯಿಗೆ ಸಮನಾಳದ ಕದ್ರುವಿಗೆ ಏನೂ ಮಾಡಲಾಗದೆ ಸರ್ಪಗಳನ್ನು ದ್ವೇಷಿಸಲು ತೊಡಗುತ್ತಾನೆ. ಅವುಗಳನ್ನು ತಿನ್ನತೊಡಗುತ್ತಾನೆ.

ಗರುಡನ ಭಯದಿಂದ ಸರ್ಪಗಳು ಪಾತಾಳವನ್ನು ಸೇರಿಕೊಳ್ಳುತ್ತವೆ. ಅನಂತ ಎಂಬ ಸರ್ಪ ವೈಕುಂಠದಲ್ಲಿ ಹರಿಯ ಮೊರೆ ಹೋದರೆ ನಾಗಗಳು ಶಿವನಿಗೆ ಶರಣಾಗುತ್ತವೆ. ಕಾಳಿಯು ನಂದ ಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ. ಆದರೆ ವಾಸುಕಿ ಎನ್ನುವ ಮಹಾಸರ್ಪವೊಂದು ತುಳುನಾಡಿಗೆ ಓಡಿಬಂದು ಸಹ್ಯಾದ್ರಿ ಬಳಿಯ ಧಾರಾ ನದಿ ಪಕ್ಕದಲ್ಲಿರುವ ಬಿಲದ್ವಾರ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದು ಗರುಡನಿಗೆ ತಿಳಿದು ಇವರಿಬ್ಬರ ಮಧ್ಯೆ ಯುದ್ಧವಾಗುತ್ತದೆ. ಇದನ್ನು ತಿಳಿದು ಇವರಿಬ್ಬರ ತಂದೆಯಾದ ಕಶ್ಯಪ ಓಡಿ ಬಂದು ಯುದ್ಧವನ್ನು ತಡೆಯುತ್ತಾನೆ.
ವಾಸುಕಿ ಪ್ರಾಣ ಭಯವನ್ನು ಹೋಗಲಾಡಿಸಲು ಕಶ್ಯಪನು ಶಿವನನ್ನು ಕುರಿತು ತಪಸ್ಸು ಮಾಡಲು ಹೇಳುತ್ತಾನೆ. ವಾಸುಕಿಯು ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಳ್ಳುತ್ತಾನೆ.

ತನ್ನ ಪುತ್ರ ಸುಬ್ರಹ್ಮಣ್ಯ ಬರುವವರೆಗೆ ತಪಸ್ಸು ಮುಂದಿವರಿಸಲು ಶಿವನು ವಾಸುಕಿಗೆ ಹೇಳುತ್ತಾನೆ. ಇದಾಗಿ ಹಲವು ವರ್ಷಗಳ ಬಳಿಕ ತಾರಕಾಸುರನನ್ನು ಕೊಂದ ಕಾರ್ತಿಕೇಯ ತನ್ನ ಆಯುಧವನ್ನು ಧಾರಾ ನದಿಯಲ್ಲಿ ಬಂದು ತೊಳೆಯುತ್ತಾನೆ. ಇದರಿಂದ ನದಿಗೆ ಕುಮಾರಧಾರ ಎನ್ನುವ ಹೆಸರಾಯಿತು.

ಸ್ವರ್ಗದಿಂದ ಓಡಿ ಬಂದ ಇಂದ್ರನ ಮಗಳಾದ ದೇವಸೇನೆ ವಾಸುಕಿಯನ್ನು ಮದುವೆಯಾಗಲು ಬಯಸುತ್ತಾಳೆ. ಕಾರ್ತಿಕೇಯನ ಒಪ್ಪಿಗೆ ಪಡೆದು ಕುಮಾರಧಾರ ತಟದಲ್ಲಿ ಚಂಪಾ ಷಷ್ಠಿಯ ದಿನ ಇವರ ಮದುವೆಯಾಗುತ್ತದೆ. ಪತ್ನಿ ದೇವಸೇನೆಯೊಂದಿಗೆ ವಾಸುಕಿಯು ಕುಕ್ಕೆಯಲ್ಲಿ ನೆಲೆಸುವಂತೆ ಸುಬ್ರಹ್ಮಣ್ಯ ಹೇಳಿದಾಗ ಬ್ರಹ್ಮನು ಎಲ್ಲ ದೇವರ ಸಮ್ಮುಖದಲ್ಲಿ ವಿಶ್ವಕರ್ಮ ಮಾಡಿದ ವಾಸುಕಿಯ ವಿಗ್ರಹವನ್ನು ಕುಕ್ಕೆ ಸುಬ್ರಹಣ್ಯದಲ್ಲಿ ಪ್ರತಿಷ್ಠಾಪಿಸುತ್ತಾನೆ.

ಸುಬ್ರಹ್ಮಣ್ಯ ದೇವರು ಧರೆಗೆ ಇಳಿಯುವಂತೆ ಮಾಡಿದ ವಾಸುಕಿಯನ್ನು ತುಳುನಾಡಿನ ಮನೆ ಮನೆಗಳಲ್ಲಿ ಪೂಜಿಸುವಂತಾಗಲಿ ಎಂದು ಎಲ್ಲ ದೇವರುಗಳು ವಾಸುಕಿಯನ್ನು ಹರಸುತ್ತಾರೆ. ಹೀಗಾಗಿ ಚಂಪಾ ಷಷ್ಠಿಯನ್ನು ಅತ್ಯಂತ ವೈಭವದಿಂದ ಕರಾವಳಿಯಲ್ಲಿ ಆಚರಿಸಲಾಗುತ್ತದೆ.

ಶಿವನಿಗೂ ಇದೆ ಸಂಬಂಧ

ಮಹಾರಾಷ್ಟ್ರದ ಪುಣೆಯ ಜೆಜುರಿ ಎಂಬ ಸ್ಥಳದಲ್ಲಿ ಖಂಡೋಬಾ ದೇವಾಲಯದಲ್ಲಿ ಚಂಪಾ ಷಷ್ಠಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇಲ್ಲಿ ಆರು ದಿನಗಳ ಕಾಲ ಖಂಡೋಬಾ ಆರಾಧಕರು ಉಪವಾಸವನ್ನು ಆಚರಿಸುತ್ತಾರೆ. ಶಿವನು ಉಗ್ರ ಯೋಧ ಖಂಡೋಬನ ರೂಪದಲ್ಲಿ ದುಷ್ಟ ಸಹೋದರರಾದ ಮಲ್ಲ ಮತ್ತು ಮಾಲಿಯನ್ನು ಚಂಪಾ ಷಷ್ಠಿಯ ದಿನದಂದು ವಧಿಸುತ್ತಾನೆ. ಹೀಗಾಗಿ ಇದನ್ನು ಖಂಡೋಬಾ ದಿನವೆಂದೂ ಆಚರಿಸಲಾಗುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಚಂಪಾ ಷಷ್ಠಿಯ ಈ ದಿನವನ್ನು ಶಿವನನ್ನು ಪೂಜಿಸಲಾಗುತ್ತದೆ.

ಭಗವಾನ್ ಖಂಡೋಬಾನನ್ನು ಬೇಟೆಗಾರರು, ಯೋಧರು ಮತ್ತು ರೈತರ ಪ್ರಭು ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಜನರು ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ಸಮರ್ಪಣೆಯಿಂದ ಆಚರಿಸುತ್ತಾರೆ.

ಆಚರಣೆಗಳೇನು?

ಚಂಪಾ ಷಷ್ಠಿಯ ದಿನದ ಆರು ದಿನಗಳ ಮೊದಲು ವಿವಿಧ ಆಚರಣೆಗಳು ನಡೆಯುತ್ತವೆ. ಅಮವಾಸ್ಯೆಯಂದು ಆರಂಭಗೊಳ್ಳುವ ವಿವಿಧ ಆಚರಣೆಗಳು ಚಂಪಾ ಷಷ್ಠಿಯ ದಿನ ಕೊನೆಗೊಳ್ಳುತ್ತದೆ. ಈ ದಿನ ದೇವರಿಗೆ ಹಣ್ಣು, ಅರಿಶಿನ ಪುಡಿ ಮತ್ತು ಇತರ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಆರು ದಿನಗಳ ಕಾಲ ಭಕ್ತರು ದೇವರ ಮುಂದೆ ಎಣ್ಣೆ ದೀಪಗಳನ್ನು ಉರಿಸುತ್ತಾರೆ.

ಚಂಪಾ ಷಷ್ಠಿಯ ದಿನ ಮುಂಜಾನೆ ಬೇಗ ಎದ್ದು ಪವಿತ್ರ ಸ್ನಾನ ಮಾಡುವ ಭಕ್ತರು ಇಡೀ ದಿನ ಉಪವಾಸ ಆಚರಿಸುತ್ತಾರೆ. ದಕ್ಷಿಣಾಭಿಮುಖವಾಗಿ ಕುಳಿತು ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ. ತುಪ್ಪ, ಮೊಸರು ಮತ್ತು ನೀರಿನ ಅರ್ಘ್ಯವನ್ನು ಸಮರ್ಪಿಸಲಾಗುತ್ತದೆ. ಭಕ್ತರು ಶಿವ, ಸುಬ್ರಹ್ಮಣ್ಯ, ನಾಗ ದೇವರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸುತ್ತಾರೆ, ಭಕ್ತಿಯಿಂದ ಪ್ರಾರ್ಥಿಸುತ್ತಾರೆ.