ಚಿಕ್ಕಮಗಳೂರು, ನ.1: ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ದೇವಿರಮ್ಮನ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬಂದಿದ್ದು, ಭಕ್ತರು ಬರಿಗಾಲಲ್ಲಿ ಕಾಡು-ಮೇಡು ಅಲೆದು ದೇವಿಯ ದರ್ಶನ ಪಡೆದು ಪುನೀತರಾದರು. ಜಿಲ್ಲಾಡಳಿತ ಕೂಡ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಸೌಲಭ್ಯ ಹಾಗೂ ಭದ್ರತೆ ಒದಗಿಸಿದೆ. ಆದಾಗ್ಯೂ, ಅನೇಕ ಭಕ್ತರು ಅಸ್ವಸ್ಥರಾಗಿದ್ದು, ಕೆಲವರು ಗಾಯಗೊಂಡಿದ್ದಾರೆ.
ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥ, ಕೆಲವರಿಗೆ ಗಂಭೀರ ಗಾಯ
ಬೆಟ್ಟ ಏರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿದ್ದು ಕಿರಿದಾದ ದುರ್ಗಮ ಮಾರ್ಗದಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು ಭಕ್ತರಿಗೆ ಜಾಗ್ರತೆಯಿಂದ ಬೆಟ್ಟ ಏರುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿತ್ತು. ಆದಾಗ್ಯೂ ಬೆಟ್ಟದ ಮೇಲೆ ಹತ್ತಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದಾರೆ. ಕೆಲವರು ದುರ್ಗಮ ದಾರಿಯಲ್ಲಿ ನಡೆಯುವಾಗ ಬಿದ್ದು ಕೈ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ.
ಗಾಯಾಳುಗಳು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲು
ಗಾಯಗೊಂಡು ಅಸ್ವಸ್ಥರಾದವರನ್ನು ಅಗ್ನಿಶಾಮಕದಳ, ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಟ್ಟದ ತುದಿಯಿಂದ 5 ಕಿಮೀ ವರೆಗೂ ಸ್ಟ್ರೆಚರ್ ಮೂಲಕ ಹೊತ್ತು ಆಂಬ್ಯುಲೆನ್ಸ್ ಮೂಲಕ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಭದ್ರತೆಗಾಗಿ 800 ಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಇಲ್ಲಿ ದೇವಿಗೆ ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನ ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನ ದೇವಿಗೆ ಸಮರ್ಪಿಸ್ತಾರೆ.
3800 ಅಡಿ ಎತ್ತದಲ್ಲಿರುವ ದೇವಿರಮ್ಮನ ಬೆಟ್ಟ
ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯೋದು. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು. ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನೇ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನ ಆಚರಿಸೋದು.