ಹಾವೇರಿ ಜಿಲ್ಲೆಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದ ನಡೆದಿದೆ. ಉದ್ರಿಕ್ತರು ಕಲ್ಲು ತೂರಾಟ ಮಾಡಿದ್ದು, ಭಯದಿಂದ ಮುಸ್ಲಿಂ ಕುಟುಂಬಗಳು ಊರನ್ನೇ ತೊರೆದಿದ್ದಾರೆ.

ಜಿಲ್ಲೆಯ ಸವಣೂರು ತಾಲೂಕು ಕಡಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ಗಲಾಟೆಯೇ ನಡೆದಿದೆ. ಮಸೀದಿ ಸುತ್ತಮೂತ್ತಲಿನ 60ಕ್ಕೂ ಅಧಿಕ ಮನೆಗಳು, ಮೂರು ದೇವಾಸ್ಥಾನ ಮತ್ತು ಗರಡಿ ಮನೆಗಳು ವಕ್ಫ್ ಆಸ್ತಿಗೆ ಹೋಗುತ್ತಿವೆ ಅನ್ನು ಸುತ್ತೋಲೆಯನ್ನು ನೋಡಿದ ಜನರು ಏಕಾಏಕಿ ಗ್ರಾಮದಲ್ಲಿ ಗಲಾಟೆ ನಡೆಸಿದ್ದಾರೆ. ಈಗ ಬಂಧನ ಭೀತಿಯಿಂದ ಗಲಾಟೆ ನಡೆದ ಓಣಿಯ ಜನರು ಊರನ್ನೇ ಬಿಟ್ಟು ಓಡಿದ್ದಾರೆ. 8ಕ್ಕೂ ಅಧಿಕ ಮನೆಗಳು ಜಖಂಗೊಂಡಿದ್ದು, ಭಯದಿಂದ ಎರಡು ಸಮುದಾಯದ ಜನರು ಗ್ರಾಮವನ್ನು ಬಿಟ್ಟು ಹೋಗಿದ್ದಾರೆ.

ವಕ್ಫ್ ಸಚಿವ ಜಮೀರ್ ಕಳೆದ ಸೆ.3ರಂದು ನಡೆದ ಸಭೆಯಲ್ಲಿ ನೀಡಿದ ಸೂಚನೆ ಹಿನ್ನಲೆ ಸೆ.27 ರಂದೇ ಜಿ.ಪಂ ಸಿಇಒ ಅಕ್ಷಯ್ ಶ್ರೀಧರ್ ವಕ್ಫ್ ಆಸ್ತಿ ಇಂಡೀಕರಣಕ್ಕೆ ಆದೇಶ ಮಾಡಿದ್ದರು. ಹೀಗಾಗಿ ಸರ್ಕಾರದ ನಡೆಯಿಂದ ಆಕ್ರೋಶಗೊಂಡ ಜನರು ಗಲಾಟೆ ನಡೆಸಿದರು. ಹಾವೇರಿ ಡಿಸಿ ವಿಜಯ್ ಮಹಾಂತೇಶ್, ಎಸ್‌ಪಿ ಅಂಶುಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಮನವೊಲಿಸಿದರು. ಯಾರ ಮನೆಗಳ ದಾಖಲೆಗಳಲ್ಲೂ ವಕ್ಫ್ ಎಂದು ಸೇರಿಸುವುದಿಲ್ಲ ಎಂದು ಡಿಸಿ ಭರವಸೆ ನೀಡಿದರು.

ರಾಜ್ಯದ್ಯಂತ ಜಮೀನು ವಕ್ಫ್ ಬೋರ್ಡ್‌ಗೆ ಸೇರಿರುವ ವಿಚಾರ ಚರ್ಚೆಗೆ ಕಾರಣವಾಗಿ ರಾಜಕೀಯ ಜಟಾಪಟಿ ಕೂಡ ನಡೆಯುತ್ತಿದೆ. ಎರಡು ವರ್ಷದ ಹಿಂದೆ ಕರಾವಳಿ ಭಾಗದಲ್ಲಿ ಆರಂಭವಾಗಿ ಭಾರಿ ಜಟಾಪಟಿಗೆ ಕಾರಣವಾಗಿದ್ದ ಧರ್ಮದ ದಂಗಲ್ ಮತ್ತೆ ಚರ್ಚೆಗೆ ಬಂದಿದೆ. ದೀಪಾವಳಿ ಸಂದರ್ಭ ಶ್ರೀರಾಮ ಸೇನೆ ಸಂಘಟನೆ ಹಿಂದೂಗಳು ಹಿಂದೂಗಳಿಂದ ಮಾತ್ರ ವ್ಯಾಪಾರ ಮಾಡಿ ಅನ್ಯ ಧರ್ಮೀಯರ ಜೊತೆ ವ್ಯವಹಾರ ಮಾಡಬೇಡಿ ಎಂದು ಬಹಿಷ್ಕಾರದ ಕರೆ ಕೊಟ್ಟಿದೆ, ಜೊತೆಗೆ ಅಭಿಯಾನಕ್ಕೂ ಕರೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ವಕ್ಫ್ ತಿದ್ದುಪಡಿಗೆ ಮುಂದಾಗಿದ್ದಾರೆ. ಇದು ಮುಂದಿನ ಡಿಸೆಂಬರ್‌ನ ಅಧಿವೇಶನದಲ್ಲಿ ಪ್ರಸ್ತಾಪವಾಗಲಿದೆ ಎಂದು ಸಂಘಟನೆಯ ಸಭೆಗಳಲ್ಲಿ ಪ್ರಚಾರಪಡಿಸಲಾಗುತ್ತಿದೆ.

ವಕ್ಫ್ ಆಸ್ತಿ ವಿವಾದ ಈಗ ಗ್ರಾಮದಲ್ಲಿ ಕಿಚ್ಚುಹಚ್ಚಿದ್ದು, ಸದ್ಯ ಕಡಕೋಳ ಗ್ರಾಮ ಬೂದಿ ಮುಚ್ಚಿದ ಕೆಂಡದಂತೆ ಇದೆ. ನೂರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಗೆ ಎಚ್ಚರವಹಿಸಲಾಗಿದೆ. ಆದರೆ ಕರಾವಳಿಯಲ್ಲಿ ಇದು ಬೇರೆ ರೂಪಕ್ಕೆ ತಿರುಗಿದೆ.