9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ಶಿಕ್ಷಕ ಆರೀಫ್​ವುಲ್ಲಾ ಪತ್ನಿ ಕಿರುಕುಳಕ್ಕೆ ಅರ್ಚನಾ ಬಲಿ

ಹಾವೇರಿ, (ಜುಲೈ 12): ಹಾವೇರಿ ಜಿಲ್ಲೆಯ ದೂದಿಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣವರ ಆತ್ಮಹತ್ಯೆ ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ. ಹತ್ತು ದಿನಗಳ ಹಿಂದೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಅರ್ಚನಾ ಗೌಡಣ್ಣ, ಶಿಕ್ಷಕನ ಪತ್ನಿ ಕಿರುಕುಳಕ್ಕೆ ಬೇಸತ್ತು ಆಲದಕಟ್ಟಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಪೋಷಕರು ಏಕಾಏಕಿ ಅಂತ್ಯಕ್ರಿಯೆ ಮಾಡಿದ್ದರು. ಇದೀಗ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಮೃತದೇಹವನ್ನು ಹೊರ ತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಅರ್ಚನಾ ದೂದಿಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಶಾಲೆಯಲ್ಲಿ ಶಿಕ್ಷಕನಾಗಿದ್ದ ಆರೀಫ್​ವುಲ್ಲಾ ಪುತ್ರಿ ಝೋಯಾ ಓದುತ್ತಿದ್ದು, ಅರ್ಚನಾ ಮತ್ತು ಝೋಯಾ ಒಂದೇ ಕ್ಲಾಸ್​ಮೆಂಟ್ ಆಗಿದ್ದರಿಂದ ಇಬ್ಬರು ಸ್ನೇಹಿತರಾಗಿದ್ದರು. ಆದ್ರೆ, ಝೋಯಾಗಿಂತ ಅರ್ಚನಾ ಓದಿನಲ್ಲಿ ಸ್ವಲ್ಪ ಮುಂದಿದ್ದಳು. ಇದನ್ನು ಸಹಿಸಿಕೊಳ್ಳದ ಶಿಕ್ಷಕ ಆರೀಫ್​ವುಲ್ಲಾನ ಪತ್ನಿ, ಅರ್ಚನಾಳನ್ನು ಮನೆಗೆ ಕರೆಯಿಸಿಕೊಂಡು ಕಿರುಕುಳ ನೀಡಿದ್ದಾಳೆ. ಇದರಿಂದ ಮನನೊಂದು ಅರ್ಚನಾ ಹತ್ತು ದಿನಗಳ ಹಿಂದೆ ಡೆತ್​ನೋಟ್​ ಬರೆದಿಟ್ಟು ಜುಲೈ 2ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

9ನೇ ತರಗತಿಯಲ್ಲಿ ಓದುತ್ತಿದ್ದ ಅರ್ಚನಾ ಜೂನ್ 2ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆದ್ರೆ, ಆತ್ಮಹತ್ಯೆಗೆ ಮುನ್ನ ಡೆತ್​ನೋಟ್ ಬರೆದಿಟ್ಟಿದ್ದು,  ಶಿಕ್ಷಕನ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ನನ್ನ ಮಗಳಿಗಿಂತ ನೀನು ಯಾಕೆ ಓದಿನಲ್ಲಿ ಮುಂದೆ ಇದ್ದಿಯಾ ಎಂದು ಕಿರುಕುಳ ನೀಡುತ್ತಿದ್ದರಂತೆ. ಇದರ ಜತೆಗೆ ಅರ್ಚನಾ ವೈಯಕ್ತಿಕ ಕಾರಣಗಳನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ. ಆದ್ರೆ, ಅರ್ಚನಾ ಪೋಷಕರು ಯಾವುದನ್ನು ಗಮನಿಸಿದ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.

ಸದ್ಯ ವಿದ್ಯಾರ್ಥಿನಿ ಸಾವಿನ ಬಗ್ಗೆ ಸಂಶಯ ಮೂಡಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಜತೆಗೆ ಹಿರೇಕೇರೂರು ತಾಲೂಕು ಆಲದಕಟ್ಟಿ ಗ್ರಾಮದಲ್ಲಿ ಹೂತಿಟ್ಟಿದ್ದ ವಿದ್ಯಾರ್ಥಿನಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಹಾವೇರಿ ಉಪ ವಿಭಾಗಾಧಿಕಾರಿ ಚೆನ್ನಪ್ಪ ನೇತೃತ್ವದಲ್ಲಿ ವಿದ್ಯಾರ್ಥಿನಿ ಮೃತ ದೇಹ ಹೊರ ತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ಸ್ಥಳದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪ್ಲೊರೆನ್ಸಿಕ್ ತಜ್ಞರು ,ವಿದ್ಯಾರ್ಥಿನಿ ಸಂಬಂಧಿಕರು ಉಪಸ್ಥಿತರಿದ್ದರು.