ಕಾರವಾರ: ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಕಾರವಾರದ ಕಾಳಿ ದ್ವೀಪದಲ್ಲಿ ಆರಂಭಿಸಿದ್ದ ಕಾಂಡ್ಲಾ ನಡಿಗೆ ಸೂಕ್ತ ನಿರ್ವಹಣೆ ಕಾಣದೆ ಪಾಳು ಬಿದ್ದಿದೆ.
2020–21ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ಸುಮಾರು 20 ಲಕ್ಷ ವೆಚ್ಚದಲ್ಲಿ 240 ಮೀಟರ್ ಉದ್ದದ ಕಾಂಡ್ಲಾ ನಡಿಗೆ ಪಥ ನಿರ್ಮಿಸಲಾಗಿತ್ತು. ಕೆಲ ದಿನಗಳವರೆಗೆ ಉತ್ತಮವಾಗಿ ನಡೆದಿದ್ದ ಪಥವು ನಂತರ ನಿರ್ವಹಣೆ, ಪ್ರಚಾರ ಇಲ್ಲದೆ ಸೊರಗಿದೆ.
ನಡುಗಡ್ಡೆಯಲ್ಲಿರುವ ಕಾಳಿಕಾಮಾತಾ ದೇವಾಲಯದ ಸಮೀಪ ನದಿಯ ಅಂಚಿನಲ್ಲಿ ಕಾಂಡ್ಲಾ ನಡಿಗೆಗೆ ಅನುಕೂಲವಾಗುವಂತೆ ಮರದ ಹಲಗೆಗಳನ್ನು ಒಟ್ಟೊಟ್ಟಾಗಿ ಜೋಡಿಸಿ ಸೇತುವೆ ನಿರ್ಮಿಸಲಾಗಿದೆ. ಸಿಮೆಂಟ್ ಕಂಬಗಳನ್ನು ಆಧರಿಸಿ ಇದು ನಿಂತಿದೆ. ಅಲ್ಲಲ್ಲಿ ಮರದ ಹಲಗೆಗಳು ಮುರಿದು ಬಿದ್ದಿದ್ದರೆ, ಮತ್ತೆ ಕೆಲವೆಡೆ ದುರ್ಬಲ ಸ್ಥಿತಿಯಲ್ಲಿವೆ. ಹೀಗಾಗಿ, ‘ನಿರ್ವಹಣೆ ಕಾರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಎಚ್ಚರಿಕೆ ಫಲವನ್ನು ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದೆ.