ಗದಗ ಜಿಮ್ಸ್ ಆಸ್ಪತ್ರೆಯ ಮಕ್ಕಳ ಐಸಿಯು ವಾರ್ಡ್​ನಲ್ಲಿ ಜಿರಳೆಗಳ ಕಾಟ

ಗದಗ, ಅ.13: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಜಿರಳೆಗಳ ಕಾಟಕ್ಕೆ ರೋಗಿಗಳು ಒದ್ದಾಡುತ್ತಿದ್ದಾರೆ. ಮಕ್ಕಳ ಐಸಿಯು ವಾರ್ಡ್ ನಲ್ಲೇ ಜಿರಳೆಗಳ ಸಾಮ್ರಾಜ್ಯ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಜಿರಳೆಗಳ ಹಾವಳಿ‌. ರಾತ್ರಿಯಿಡೀ ನಿದ್ದೆ ಇಲ್ದೇ ಮಕ್ಕಳ ಒದ್ದಾಡುತ್ತಿದ್ದಾರೆ. ಜಿಮ್ಸ್ ಆಡಳಿತ ಯಡವಟ್ಟುಗಳ ವಿರುದ್ಧ ಗದಗ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಅನ್ನೋದು ಹದಗೆಟ್ಟು ಹೋಗಿದೆ. ಈ ಆಸ್ಪತ್ರೆಗೆ ಬಂದ್ರೆ ರೋಗಳು ವಾಸಿಯಾಗೋದಕ್ಕಿಂತ ಮತ್ತಷ್ಟು ರೋಗಗಳು ಹಚ್ಚಿಕೊಂಡು ಹೋಗುವಂತ ಚಿತ್ರಣಗಳೇ ಹೆಚ್ಚಿವೆ. ಈಗ ಜಿಮ್ಸ್ ಆಸ್ಪತ್ರೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆ. ಅದ್ರಲ್ಲೂ ಮಕ್ಕಳ ವಿಭಾಗದ ಐಸಿಯುನಲ್ಲಿ ಜಿರಳೆಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ರಾತ್ರಿಯಿಡೀ ನಿದ್ದೆ ಇಲ್ಕದೇ ರೋಗಿಗಳು ಪರದಾಡುತ್ತಿದ್ದಾರೆ. ರಾತ್ರಿಯಾದ್ರೆ ಸಾಕು ಬೆಡ್ ಗಳ ಮೇಲೆ ಹರಿದಾಡುವ ಜಿರಳೆಗಳು ಮಕ್ಕಳ ಜೀವ ಹಿಂಡುತ್ತಿವೆ.

ಈ ಜಿರಳೆಗಳು ಮಕ್ಕಳ ಮೇಲೆ ಮಾತ್ರ ಹರದಾಡುವುದಿಲ್ಲ. ಮಕ್ಕಳು ತಿನ್ನುವ ಆಹಾರದ ಮೇಲೂ ಹರಿದಾಡುತ್ತಿವೆ. ಅದೇ ಆಹಾರ ಮಕ್ಕಳು ತಿನ್ನುವಂತಾಗಿದೆ. ಹೀಗಾಗಿ ಮಕ್ಕಳ ಜೀವಕ್ಕೆ ಇಲ್ಲಿ ಭಾರಿ ಅಪಾಯ ಅನ್ನೋ ವಾತಾವರಣ ಇದೆ. ಇಷ್ಟೇಲ್ಲಾ ಕಣ್ಣಾರೆ ಕಂಡ್ರು ವೈದ್ಯರು, ಸಿಬ್ಬಂದಿಗಳು ಮಾತ್ರ ಯಾರಿಗೇನಾದ್ರೂ ಆದ್ರೆ ನಮಗೇನು ಅನ್ನೋ ಬೇಜವಾಬ್ದಾರಿ ತೋರುತ್ತಿದ್ದಾರೆ. ಇನ್ನೂ ಜಿಮ್ಸ್ ನಿರ್ದೇಶಕರು ಎಸಿ ರೂಂ ಬಿಟ್ಟು ಆಸ್ಪತ್ರೆ ಕಡೆ ಸುಳಿಯುವುದೇ ಇಲ್ವಂತೆ. ಹೀಗಾಗಿ ಮಕ್ಕಳ ವಿಭಾಗದ ಮುಖ್ಯಸ್ಥರು ಸಮಸ್ಯೆ ಬಗ್ಗೆ ನಿರ್ದೇಶಕರು, ಎಂಎಸ್ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ ಅಂತ ಸಿಬ್ಬಂದಿಗಳೇ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮಕ್ಕಳ ಪೊಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳ ಆರೋಗ್ಯದಲ್ಲಿ ಏನಾದ್ರೂ ಹೆಚ್ಚುಕಮ್ಮಿಯಾದ್ರೆ ಹೊಣೆ ಯಾರು? ಅಂತ ಪ್ರಶ್ನೆ ಮಾಡಿದ್ದಾರೆ.

ಆತಂಕ, ಭಯದಲ್ಲೇ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ ಅಂತ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಸಾಕಷ್ಟು ಅವ್ಯವಸ್ಥೆ ಇದ್ರೂ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಮೌನ ತಾಳಿದ್ದು ಗದಗ ಜಿಲ್ಲೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರನ್ನು ಕೇಳಿದ್ರೆ, ಆಸ್ಪತ್ರೆ ನನ್ನ ವ್ಯಾಪ್ತಿಗೆ ಬರಲ್ಲ. ಎಂಎಸ್ ವ್ಯಾಪ್ತಿಗೆ ಬರುತ್ತೆ. ಸರಿ ಮಾಡಲು ಎಂಎಸ್ ಅವ್ರಿಗೆ ತಿಳಿಸಲಾಗಿದೆ ಅಂತ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.