ಗದಗ ಬೆಟಗೇರಿಯಲ್ಲಿ ಲವ್ ಜಿಹಾದ್ ವಿರುದ್ಧ ರಣ ಕಹಳೆ: ಹಿಂದೂ ಯುವತಿಯರು, ಮಹಿಳೆಯರಿಂದ ಆಣೆ ಪ್ರಮಾಣ

ಗದಗ, ಸೆಪ್ಟೆಂಬರ್ 13: ಲವ್ ಜಿಹಾದ್​ಗೆ ಬಲಿಯಾಗದಂತೆ ಗಣೇಶನ ಸಮ್ಮುಖದಲ್ಲಿ ಆಣೆ ಪ್ರಮಾಣ ಕಾರ್ಯ ನೆರವೇರಿತು. ಗದಗ ಬೆಟಗೇರಿಯ ಹಿಂದೂ ಯುವತಿಯರು, ಮಹಿಳೆಯರು, ಪೋಷಕರು ದೇವರ ಸಾಕ್ಷಿಯಾಗಿ ಲವ್ ಜಿಹಾದ್ ವಿರುದ್ಧ ಸಮರ ಸೇರಿದ್ದಾರೆ. ಗದಗದ ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ಕ್ರಾಂತಿ ಸೇನೆ ವತಿಯಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶನ ಪ್ರತಿಷ್ಠಾಪನೆ ಅಂಗವಾಗಿ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದೇ ವೇಳೆ, ಹಿಂದೂ ಯುವತಿಯರು ಹಾಗೂ ಮಹಿಳೆಯರು ಲವ್ ಜಿಹಾದ್​ಗೆ ಬಲಿಯಾಗದಂತೆ ಜಾಗೃತಿ ಮೂಡಿಸಲಾಯಿತು.

ಹಿಂದೂ ಸಮಾಜದ ಯುವತಿಯರು, ಮಹಿಳೆಯರು ಹಾಗೂ ಅವರ ಪೋಷಕರಿಗೆ ಆಣೆ ಪ್ರಮಾಣ ಮಾಡಿಸಲಾಯಿತು. ಯಾವುದೇ ಕಾರಣಕ್ಕೂ ಲವ್ ಜಿಹಾದ್​ಗೆ ಒಳಗಾಗಬಾರದು ಎಂದು ಶ್ರೀ ಗಣೇಶ ಹಾಗೂ ಶ್ರೀ ರಾಮ ಸೇರಿದಂತೆ ದೇರವ ಹೆಸರಿನಲ್ಲಿ ಪ್ರಮಾಣ‌‌ ಮಾಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಯುವತಿಯರು ಲವ್ ಜಿಹಾದ್​​ಗೆ ಒಳಗಾಗಲ್ಲ ಎಂದು ಪ್ರಮಾಣ ಮಾಡಿದರು.

Gadag-Betageri Young Hindu Women took oath against Love Jihad, Kannada news

ಗದಗ ನಗರದಲ್ಲಿ ಈ ಹಿಂದೆ ಲವ್ ಜಿಹಾದ್ ಪ್ರಕರಣ ‌ನಡೆದಿತ್ತು. ಹಾಗೇ ಹುಬ್ಬಳ್ಳಿಯಲ್ಲಿ ಕೂಡಾ ಲವ್ ಜಿಹಾದ್ ನಂತಹ ಪ್ರಕರಣಗಳು ನಡೆದಿದ್ದವು. ಹೀಗಾಗಿ ಹಿಂದೂ ಸಮಾಜದವರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.

ಶಾಲೆ ಹಾಗೂ ಕಾಲೇಜಿನಲ್ಲಿ ಯುವತಿಯರನ್ನು‌ ಪುಸಲಾಯಿಸಿ ಲವ್ ಜಿಹಾದ ಖೆಡ್ಡಾಕ್ಕೆ ಕೆಡವಲಾಗುತ್ತಿದೆ. ಇಂತಹ ವೇಳೆಯಲ್ಲಿ ಯುವತಿಯರು ಯಾವುದೇ ಭಯ ಇಲ್ಲದೆ, ತಮ್ಮ ಪೋಷಕರಿಗೆ ವಿಷಯವನ್ನು ತಿಳಿಸಬೇಕು. ಹಾಗೇ ಹಿಂದೂ ಸಮಾಜದ ಯುವತಿಯರು ಲವ್ ಜಿಹಾದ್​​ಗೆ ಬಲಿಯಾಗುತ್ತಿರುವ ವಿಷಯ ಗಮನಕ್ಕೆ ಬಂದರೆ, ಹಿಂದೂ ಸಮಾಜದ ಯುವಕರು ಕೂಡಾ ಅದನ್ನು ತಡೆ ಹಿಡಿಯಬೇಕು, ಆಗ ಮಾತ್ರ ಹಿಂದೂ ಸನಾತನ ಧರ್ಮ ಉಳಿಯಲು ಸಾಧ್ಯ. ಹೀಗಾಗಿ ಕ್ರಾಂತಿ ಸೇನೆ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಎಂದು ಕ್ರಾಂತಿ ಸೇನೆ ಅಧ್ಯಕ್ಷ ಬಾಬು ಬಾಕಳೆ ತಿಳಿಸಿದ್ದಾರೆ.