ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

ಯಾದಗಿರಿ : ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ಅತ್ಯಾಚಾರ ಎಸಗಿದ ಆರೋಪಿ ಮೇಲೆ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ. ಸವರ್ಣೀಯ ಯುವಕ ಅತ್ಯಾಚಾರವೆಸಗಿದ್ದರಿಂದ 15 ವರ್ಷದ ಬಾಲಕಿ 5 ತಿಂಗಳ ಗರ್ಭಿಣಿ ಆಗಿದ್ದಳು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ‌ಗ್ರಾಮವೊಂದರಲ್ಲಿ‌ ಈ ಘಟನೆ ನಡೆದಿದೆ.

ಪ್ರಕರಣ ಸಂಬಂಧ ಬಾಲಕಿ ಪೋಷಕರು ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದರು. ಸಂಧಾನಕ್ಕೆ ಬಾರದೇ ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದಕ್ಕೆ ಕೋಪಗೊಂಡ ಸವರ್ಣೀಯ ಮುಖಂಡರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ದಲಿತರಿಗೆ ದಿನಸಿ ಕಿರಾಣಿ ಹಾಗೂ ದೈನಂದಿನ ವಸ್ತುಗಳನ್ನು ನೀಡದಂತೆ ಆದೇಶಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಪೆನ್, ಪೆನ್ಸಿಲ್ ಸಹ ನೀಡದಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಗ್ರಾಮದ ದಲಿತರಿಗೆ ಬಹಿಷ್ಕಾರ ಹಾಕಿರುವ ಆಡಿಯೊ ವೈರಲ್ ಆಗಿದೆ.

ಅಂಗಡಿಯವರ ಜತೆಗೆ ಮಹಿಳೆಯೊಬ್ಬರು ಮಾತನಾಡಿದ್ದು, ಅಂಗಡಿಗೆ ಉಪ್ಪು ತರಲು ಹೋದರೆ ಉಪ್ಪು ಕೊಡುತ್ತಿಲ್ಲ. 8-10 ಜನ ಬಂದು ನಮಗೆ ಉಪ್ಪು ಕೊಡಬೇಡಿ ಅಂದಿದ್ದಾರೆ. ಮತ್ತೊಬ್ಬ ಅಂಗಡಿಯೊಬ್ಬನಿಂದ ಪೆನ್ನು ನೀಡಲು ನಿರಾಕರಿಸಿದ್ದಾರೆ. ನನಗೆ ಏನು ಗೊತ್ತಿಲ್ಲ, ಊರಿನವರು ಕೊಡಬೇಡಿ ಅಂದಿದ್ದಾರೆ. ಊರಿನವರು ಹೇಗೆ ಇರಬೇಕೆಂದು ಹೇಳಿದ್ದಾರೆ ನಾವು ಹಾಗೆ ಇರಬೇಕೆಂದು ಅಂಗಡಿ ಮಾಲೀಕ ಮಾತಾಡಿದ್ದಾನೆ.

ಬಹಿಷ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶೀಧರ ಕೋಸುಂಬೆ ಪ್ರತಿಕ್ರಿಯಿಸಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಸಂತ್ರಸ್ತೆ ಪೋಷಕರಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿರುವುದು ಕೇಳಿ ಬಂದಿದೆ. ಅದಲ್ಲದೇ ಅಲ್ಲಿನ ‌ಮಕ್ಕಳಿಗೆ ಪೆನ್ನ, ಪುಸ್ತಕ ಕೊಡದಂತೆ ವರ್ತಿಸಿದ್ದಾರೆ. ಇದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತದ್ದು, ಸಂಬಂಧಪಟ್ಟ ಜಿಲ್ಲಾಡಳಿತ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಬೇಕು. ಬಹಿಷ್ಕಾರ ತೆರವು ಮಾಡಬೇಕು, ಬಹಿಷ್ಕಾರ ಹಾಕಿದವರ ಮೇಲೆ ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದರು.