ಜಯದೇವ ಆಸ್ಪತ್ರೆಯಲ್ಲಿ ಉಚಿತ ಆಂಜಿಯೋಪ್ಲ್ಯಾಸ್ಟಿ ಕಾರ್ಯಾಗಾರ

ಬೆಂಗಳೂರು, ಸೆ.03: ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಉಚಿತ ಇಂಡೋ ಅಮೆರಿಕನ್ ಆಂಜಿಯೋಪ್ಲ್ಯಾಸ್ಟಿ ಕಾರ್ಯಾಗಾರವನ್ನು ಜಯದೇವ ಹಾಗೂ ಅಮೆರಿಕ ವೈದ್ಯರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಇದೇ ಸೆಪ್ಟೆಂಬರ್​​ 15ರಿಂದ ಈ ಕಾರ್ಯಾಗಾರ ನಡೆಯಲಿದ್ದು, ಸೆ.24, 25ರಂದು ಬಡ ರೋಗಿಗಳಿಗೆ ಉಚಿತ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಿದ್ದಾರೆ.

ಮೈಸೂರು ಜಯದೇವ ಆಸ್ಪತ್ರೆ

ಇನ್ನು ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 26, 27, 28ರಂದು ಮೂರು ದಿನಗಳ ಕಾಲ 150 ಬಡರೋಗಿಗಳಿಗೆ ಉಚಿತ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಿದ್ದಾರೆ. ಇನ್ನು ಚಿಕಿತ್ಸೆಗೆ ಬರುವ ಬಡರೋಗಿಗಳು ಬಿಪಿಎಲ್ ಕಾರ್ಡ್​ನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಲು ಜಯದೇವ ಆಸ್ಪತ್ರೆ ತಿಳಿಸಿದೆ.

ಇನ್ನು ಕಳೆದ ಆಗಸ್ಟ್ 28 ರಂದು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಜೊತೆಗೆ ಇದಕ್ಕೆ ಅಗತ್ಯವಿರುವ ಸಿಬ್ಬಂದಿ ಮತ್ತು ಹಣವನ್ನು ರಾಜ್ಯ ಸರಕಾರದಿಂದ ಕಲ್ಪಿಸಲಾಗುವುದು ಎಂದು  ಘೋಷಿಸಿದ್ದರು. ತುರ್ತು ಚಿಕಿತ್ಸೆಗೆ ಸಾವಿರಾರು ಜನರು ಬರ್ತಿದ್ದು, ಆದರೆ ಸಂಜೆ 4 ಗಂಟೆಯ ಬಳಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡವಂತಾಗಿತ್ತು. ಈ ಹಿನ್ನಲೆ ರೋಗಿಗಳು ಆಸ್ಪತ್ರೆಯ ಸಮಯ ಹಚ್ಚಿಸಿ, ಸಂಜೆ ಬಳಿಕವೂ ಚಿಕಿತ್ಸೆ ನೀಡುವಂತೆ ಒತ್ತಾಯ ಮಾಡಿದ್ದರು. ಅದರಂತೆ ದಿನದ 24 ಗಂಟೆಯೂ ಚಿಕಿತ್ಸೆ ನೀಡುವಂತೆ ಸಿಎಂ ಸೂಚಿಸಿದ್ದರು.