ಕೋಲಾರ: ಬಡ್ಡಿ ರಹಿತ ಸಾಲ ಕೊಡಿಸೋದಾಗಿ ಹಣ ಪಡೆದು ವಂಚನೆ; ಕಚೇರಿಗೆ ಮುತ್ತಿಗೆ ಹಾಕಿದ ಜನ

ಕೋಲಾರ, ಆ.18: ಕಳೆದ ಐದಾರು ತಿಂಗಳಿಂದ ಕೋಲಾರ ಜಿಲ್ಲೆಯಾದ್ಯಂತ ಮೌಲ್ಯ ಚಾರಿಟೆಬಲ್ ಟ್ರಸ್ಟ್ ಹೆಸರಿನಲ್ಲಿ ಅಮಾಯಕ ಜನರಿಗೆ ​ಬಡ್ಡಿ ರಹಿತವಾಗಿ ಸಾಲ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಬಡವರು ಹಾಗೂ ಸ್ತ್ರೀ ಶಕ್ತಿ ಸಂಘದವರಿಗೆ ಶೂನ್ಯ ಬಡ್ಡಿ ದರದಲ್ಲಿ ಬೇರೆ ಬೇರೆ ಬ್ಯುಸಿನೆಸ್ ಮಾಡುವುದಕ್ಕೆ ಬಡ್ಡಿ ಇಲ್ಲದೆ ಹಣ ಕೊಡಿಸುತ್ತೇವೆ. ಅದಕ್ಕೋಸ್ಕರ ರಿಜಿಸ್ಟ್ರೇಷನ್​ ಸೇರಿದಂತೆ ಕೆಲವು ದಾಖಲಾತಿ ಖರ್ಚಿಗೆ ಕೊಡಬೇಕು ಎಂದು ಹೇಳಿಕೊಂಡು ಒಬ್ಬೊಬ್ಬರ ಬಳಿ 15 ರಿಂದ 20 ಸಾವಿರ ರೂಪಾಯಿ ವಸೂಲಿ ಮಾಡಿಕೊಂಡು ಕೊನೆಗೆ ಸಾಲವೂ ಇಲ್ಲದೆ, ಕಟ್ಟಿದ ಹಣವೂ ಇಲ್ಲದೆ ಎಲ್ಲರೂ ನಾಪತ್ತೆಯಾಗಿದ್ದಾರೆ.

ಕಳೆದ ಜನವರಿಯಿಂದ ಬೇರೆ ಬೇರೆ ಹಳ್ಳಿಗಳಲ್ಲಿನ ಅಮಾಯಕ ಜನರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ವಸೂಲಿ ಮಾಡಿದ್ದಾರೆ. ಇದೀಗ ಕೇಳಿದರೆ ಇವತ್ತು ಕೊಡುಸ್ತೀವಿ, ನಾಳೆ ಕೊಡಿಸ್ತೀವಿ ಎಂದು ಹೇಳಿ ಸತಾಯಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಕಚೇರಿ ಬಳಿ ಜಮಾಯಿಸಿದ್ದಾರೆ. ನಮ್ಮ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಎಂದು ಹೇಳಿ ಟ್ರಸ್ಟ್​ನ ಮುಖ್ಯಸ್ಥೆ ಎಂದು ಹೇಳಿಕೊಂಡು ಸುಮಲತ ಹಾಗೂ ತಂಡ, ಜನರ ಬಳಿ ಹೋಗಿ ನಿಮ್ಮ ಹೆಸರು ನೊಂದಣಿ ಮಾಡಿಸಿಕೊಂಡರೆ ನಿಮಗೆ ಎರಡು ಮೂರು ಲಕ್ಷ ಸಾಲ ನೀಡುತ್ತಾರೆ ಎಂದು ಹೇಳಿ ಮೌಲ್ಯ ಚಾರಿಟೆಬಲ್​ ಟ್ರಸ್ಟ್ ಹೆಸರಿನ ರಶೀದಿಯನ್ನು ನೀಡಿದ್ದಾರೆ.

1800 ಕ್ಕೂ ಹೆಚ್ಚು ಜನರಿಂದ ಹಣ ವಸೂಲಿ

ನಮ್ಮ ಟ್ರಸ್ಟ್ ಕೆಲವು​ ಬ್ಯಾಂಕ್​ನೊಂದಿಗೆ ಅಗ್ರಿಮೆಂಟ್​ ಮಾಡಿಕೊಂಡಿದೆ ಎಂದು ಹೇಳಿ ನಂಬಿಸಿದ್ದಾರೆ. ಇವರ ಮಾತನ್ನ ನಂಬಿರುವ ಅಮಾಯಕ ಜನರು ಸಾಲ ಸೋಲ ಮಾಡಿ, ಮನೆಯಲ್ಲಿದ್ದ ಅಲ್ಪ ಸ್ವಲ್ಪ ಒಡವೆಗಳನ್ನು ಅಡವಿಟ್ಟು ಇವರಿಗೆ ಹಣ ಕೊಟ್ಟಿದ್ದಾರೆ. ಜೊತೆಗೆ ಕೆಲವು ಸ್ಥಳೀಯ ಮುಖಂಡರನ್ನು ಪರಿಚಯ ಮಾಡಿಕೊಂಡು ಅವರ ಮುಖಾಂತರ ಕೂಡ ಹಣ ವಸೂಲಿ ಮಾಡಿದ್ದಾರೆ. ಜನವರಿಯಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸುಮಾರು 1800 ಹೆಚ್ಚು ಜನರಿಂದ ಹಣ ವಸೂಲಿ ಮಾಡಲಾಗಿದೆ.

ಯಾವಾಗ ಸಾಲ ಕೊಡಿಸದೆ ಇದೊಂದು ವಂಚನೆ ಜಾಲ ಎನ್ನುವುದು ಗೊತ್ತಾಯ್ತೋ ಜನರೆಲ್ಲರೂ ಮೌಲ್ಯ ಚಾರಿಟೆಬಲ್​ ಟ್ರಸ್ಟ್​ ಕಚೇರಿ ಬಳಿ ಜಮಾಯಿಸಿ ಅಲ್ಲಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಜನರನ್ನು ಸಮಾಧಾನ ಪಡಿಸಿ ಮೌಲ್ಯ ಚಾರಿಟೆಬಲ್​ ಟ್ರಸ್ಟ್ ಕಚೇರಿಗೆ ಬೀಗ ಹಾಕಿದ್ದಾರೆ. ಸದ್ಯ ಹಣ ವಂಚನೆಗೊಳಗಾದವರು ನೀಡುವ ದೂರಿನ ಮೇರೆಗೆ ಕೋಲಾರ ನಗರ ಠಾಣಾ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಹೇಳಿ, ಜನರು ಕಚೇರಿ ಬಳಿ ಗಲಾಟೆ ಮಾಡದಂತೆ ತಿಳಿಸಿದ್ದಾರೆ.

ಒಟ್ಟಾರೆ ಬಡವರ ಮುಗ್ದತೆಯನ್ನು ಹಾಗೂ ಅವರ ಹಸಿವು, ಬಡತನವನ್ನೇ ಬಂಡವಾಳ ಮಾಡಿಕೊಂಡು ಸಾವಿರಾರು ಜನರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿರುವ ಈ ಜಾಲದ ವಿರುದ್ದ ಪೊಲೀಸರು ಕ್ರಮ ವಹಿಸಬೇಕಿದೆ. ಇಲ್ಲವಾದಲ್ಲಿ ಮತ್ತಷ್ಟು ಅಮಾಯಕ ಜನರಿಗೆ ಈ ಟೀಂ ವಂಚನೆ ಮಾಡೋದರಲ್ಲಿ ಯಾವುದೇ ಅನುಮಾನವಿಲ್ಲ.