ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಮೊಬೈಲ್‌ ಆಸೆ ತೋರಿಸಿ ಅತ್ಯಾಚಾರವೆಸಗಿದ ಕಾಮುಕ

ಕೋಲಾರ: ಕೋಲಾರದಲ್ಲಿ ಬಾಲಕಿಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಘಟನೆ ನಡೆದಿದೆ. 7 ವರ್ಷದ ಬಾಲಕಿಯ ಮೇಲೆ 21ರ ಸಂದೀಪ್‌ ಎಂಬಾತ ಈ ಕೃತ್ಯ ನಡೆಸಿದ್ದಾನೆ.

ನಿನ್ನೆ ಶನಿವಾರ ಬಾಲಕಿ ಮನೆಯಲ್ಲಿ ಆಡುವಾಡುತ್ತಿದ್ದಳು. ಈ ವೇಳೆ ಬಾಲಕಿಯ ತಂದೆ ಜತೆಗೆ ಮಾತನಾಡುವ ನೆಪದಲ್ಲಿ ಬಂದಿದ್ದ ಈ ಸಂದೀಪ್‌, ಬಳಿಕ ಮೊಬೈಲ್‌ ಆಸೆ ತೋರಿಸಿ ಕರೆದಿದ್ದಾನೆ. ಸಂದೀಪ್‌ ಪರಿಚಯಸ್ಥನೇ ಆಗಿದ್ದರಿಂದ ಬಾಲಕಿ‌ ಮೊಬೈಲ್‌ ನೋಡಲು ಆತನೊಂದಿಗೆ ಹೋಗಿದ್ದಾಳೆ.

ಮನೆಯ ಮಹಡಿ ಮೇಲೆ ಕರೆದುಕೊಂಡು ಹೋದ ಸಂದೀಪ್‌ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಬಾಲಕಿ ನೋವಿನಿಂದ ಕೂಗಿಕೊಂಡಾಗ ಆಕೆಯ ಬಾಯಿಮುಚ್ಚಿ ದೌರ್ಜನ್ಯ ನಡೆಸಿದ್ದಾನೆ. ಅತ್ಯಾಚಾರ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ವಾಪಸ್‌ ಮನೆಗೆ ಬಂದ ಬಾಲಕಿ ಮಂಕಾಗಿದ್ದಾಳೆ. ಆಕೆ ನೋವಿನಿಂದ ಒದ್ದಾಡುತ್ತಿದ್ದನ್ನು ಗಮನಿಸಿದ ಬಾಲಕಿ ತಾಯಿ ವಿಚಾರಿಸಿದ್ದಾರೆ. ಆಗ ಬಾಲಕಿ ನಡೆದಿದ್ದನ್ನು ಹೇಳಿದ್ದಾಳೆ. ಕೂಡಲೇ ಅಸ್ವಸ್ಥಳಾಗಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಸದ್ಯ ಕೃತ್ಯದ ಸಂಬಂಧ ಸಂತ್ರಸ್ತೆಯ ಪೋಷಕರು ಮುಳಬಾಗಿಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೌರ್ಜನ್ಯ ನಂತರ ಪರಾರಿಯಾಗಿರುವ ಆರೋಪಿಗಾಗಿ ತಲಾಶೆ ಹಾಕಿದ್ದಾರೆ