ಬೆಂಗಳೂರು, ಆಗಸ್ಟ್ 18: ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಐವರಲ್ಲಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದೆ. ಝೀಕಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಜಿಗಣಿ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಐವರು ಸೋಂಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಝೀಕಾ ವೈರಸ್ ಸೋಂಕಿತರ ಕುಟುಂಬಸ್ಥರ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಝೀಕಾ ಸೋಂಕು ಪತ್ತೆಯಾದ ಬಗ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎರಡು ವಾರದಲ್ಲಿ ಐದು ಪ್ರಕರಣಗಳು ಪತ್ತೆಯಾಗಿವೆ ಆತಂಕಪಡುವ ಅಗತ್ಯವಿಲ್ಲ. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ 7 ಕೇಸ್ ಪತ್ತೆ
ರಾಜ್ಯದಲ್ಲಿ 7 ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸಿದೆ. ಝೀಕಾ ವೈರಸ್ ಪತ್ತೆಯಾದ ಮನೆಯ ಸುತ್ತಮುತ್ತಲಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಪರೀಕ್ಷೆಗೊಳಪಡಿಸುತ್ತಿದೆ. ಆ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಕಂಟೈನ್ವೆಂಟ್ ಜೋನ್ ಎಂದು ಪರಿಗಣಿಸುತ್ತದೆ. ಝೀಕಾ ವೈರಸ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಝೀಕಾ ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ರೋಗ ಲಕ್ಷಣ ಹೀಗಿದೆ
ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗುಳ್ಳೆ, ದದ್ದುಗಳು ಕಾಣಿಸಿಕೊಳ್ಳೋದು ಝೀಕಾ ವೈರಸ್ ಗುಣಲಕ್ಷಣ. ಇನ್ನು ಬಹುತೇಕ ಝೀಕಾ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಉಳಿದಂತೆ ರೋಗಲಕ್ಷಣಗಳ ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2-7 ದಿನಗಳವರೆಗೆ ಇರುತ್ತದೆ.