ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 19,923 ಡೆಂಗ್ಯೂ ಪ್ರಕರಣ ದಾಖಲಾಗಿ 20 ಸಾವಿರ ಸನಿಹದತ್ತ ಮುನ್ನುಗ್ಗುತ್ತಿದೆ.
ರಾಜ್ಯದಲ್ಲಿ ಇದುವರೆಗೂ 10 ಜನ ಡೆಂಗ್ಯೂಗೆ ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಸಾವು, ಶಿವಮೊಗ್ಗದಲ್ಲಿ ಇಬ್ಬರು, ಹಾಸನದಲ್ಲಿ ಇಬ್ಬರು ಸಾವು ಮತ್ತು ಧಾರವಾಡ ಮತ್ತು ಹಾವೇರಿಯಲ್ಲಿ ಒಂದೊಂದು ಸಾವಾಗಿದೆ. ಜೊತೆಗೆ ಪ್ರತಿನಿತ್ಯ ಮೂನ್ನೂರರ ಸನಿಹಕ್ಕೆ ಕೇಸ್ ದಾಖಲಾಗುತ್ತಿವೆ. ಮಂಗಳವಾರ 259 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರು, ಧಾರವಾಡ, ಹಾವೇರಿ ಸೇರಿದಂತೆ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಕೇಸ್ ದಾಖಲಾಗುತ್ತಿದೆ.
ಇನ್ನೂ ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಮುಂಜಾಗ್ರತೆಯನ್ನು ವಹಿಸುತ್ತಾ ಇದೆ. ಆಸ್ಪತ್ರೆಗಳಲ್ಲಿ ಬೆಡ್ ಮೀಸಲು ಇಡುತ್ತಿದ್ದು, ಪ್ರತಿ ಶುಕ್ರವಾರ ಲಾರ್ವಾ ಸೈಟ್ಸ್ ನಾಶ ಮಾಡಲಾಗುತ್ತಿದೆ. ಮನೆಮನೆ ಸರ್ವೆ ಮಾಡಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಜನರು ಕೂಡಲೇ ಎಚ್ಚೆತ್ತುಕೊಂಡು ಡೆಂಗ್ಯೂ ರೋಗ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ.