ಆನೇಕಲ್: ವರಮಹಾಲಕ್ಷ್ಮೀ ಹಬ್ಬದ ಚೀಟಿ ಹೆಸರಿನಲ್ಲಿ ಐದು ಕೋಟಿಗೂ ಹೆಚ್ಚು ವಂಚಿಸಿ ಮಾಲೀಕ ಪರಾರಿಯಾದ ಘಟನೆ ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ.
ಚಿನ್ನ ಕೊಡುತ್ತೇನೆ ಎಂದು ಹಣ ಕಟ್ಟಿಸಿಕೊಂಡು ಸೇಟು ವಂಚನೆ ಮಾಡಿದ್ದಾನೆ. ಲಕ್ಷಾಂತರ ರೂ. ಸಾಲ ಮಾಡಿ ಮಹಿಳೆಯರು ಹಣ ಕಟ್ಟಿದ್ದರು. ಇದೀಗ ಚಿನ್ನ ಅಡವಿಟ್ಟು ಮನೆ ಖಾಲಿ ಮಾಡಿಕೊಂಡು ಸೇಟು ಎಸ್ಕೇಪ್ ಆಗಿದ್ದಾನೆ. ಮುನಾರಾಮ್ ಎಂಬ ರಾಜಸ್ಥಾನಿ ಮೂಲದ ಮಾರ್ವಾಡಿ ಆನಂದ್ ಜ್ಯುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್‌ನ ಮಾಲೀಕನಾಗಿದ್ದು, ಹತ್ತು ವರ್ಷಕ್ಕೂ ಹೆಚ್ಚು ದಿನದಿಂದ ಇಲ್ಲೇ ವಾಸವಿದ್ದ. ಈತ 150ಕ್ಕೂ ಹೆಚ್ಚು ಜನರಿಂದ ಚೀಟಿ ಹಾಕಿಸಿಕೊಂಡು ಚಿನ್ನ ಅಡಮಾನ ಇಟ್ಟುಕೊಂಡಿದ್ದ. ಹಬ್ಬ ಎಂದು ಚೀಟಿ ಹಾಕಿದ್ದವರು ಚಿನ್ನ ಬಿಡಿಸಿಕೊಂಡು ಬರಲು ಹೋದಾಗ ವಂಚನೆ ಬೆಳಕಿಗೆ ಬಂದಿದೆ.
ಚಿನ್ನದ ಅಂಗಡಿ ಮಾಲೀಕ ಅಂಗಡಿ ಹಾಗೂ ಮನೆ ಖಾಲಿ ಮಾಡಿಕೊಂಡು ಎಸ್ಕೇಪ್ ಆಗಿದ್ದು ಕಂಡು ಆತಂಕಕ್ಕೊಳಗಾದ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಸೇಟು ಇಂದ ವಂಚನೆಗೊಳಗಾದವರು ಸೂರ್ಯ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬ ಎಂದು ಹಣ ಕಟ್ಟಿದವರು ಈಗ ಬೀದಿಗೆ ಬಿದ್ದಿದ್ದಾರೆ. ಇತ್ತ ಹಬ್ಬವೂ ಇಲ್ಲ, ಅತ್ತ ಹಣವೂ ಇಲ್ಲ, ಹಣ ಕಟ್ಟಿಸಿಕೊಂಡವನು ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ಕುರಿತು ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.