ಮತ್ತಿಘಟ್ಟದಲ್ಲಿ ಮತ್ತೆ ಭೂ ಕುಸಿತ

ಶಿರಸಿ : ತಾಲೂಕಿನ ಮತ್ತಿಘಟ್ಟದ ಕೆಳಗಿನಕೇರಿ ಕಲ್ಲಗದ್ದೆಯಲ್ಲಿ ಕಳೆದ 3-4 ವರ್ಷಗಳಿಂದ ಮಳೆಗಾಲದಲ್ಲಿ ಕುಸಿತಕ್ಕೊಳಗಾಗುತ್ತಿರುವ ಅಡಿಕೆ ತೋಟ ಈಗ ಮತ್ತೆ ಕುಸಿತಗೊಂಡಿದೆ.

ಪ್ರತಿ ವರ್ಷ ಅಷ್ಟಷ್ಟೇ ಭೂ ಕುಸಿತಕ್ಕೆ ಒಳಗಾಗಿ ಅಡಿಕೆ ತೋಟ ನಾಶವಾಗುತ್ತಿದ್ದು, ಸಮೀಪದಲ್ಲಿ ವಾಸಿಸುತ್ತಿರುವ ಚಂದ್ರಶೇಖರ ನರಸಿಂಹ ಹೆಗಡೆ ಅವರ ಕುಟುಂಬವು ಭೀತಿಯಲ್ಲಿ ದಿನ ಕಳೆಯುತ್ತಿದೆ. ಹಂತಹಂತವಾಗಿ ಎಂಬಂತೆ ಕುಸಿಯುತ್ತಿರುವ ತೋಟದಲ್ಲಿನ ಅಡಿಕೆ, ತೆಂಗು, ಕೊಕ್ಕೋ ಮರಗಳು ಕಣಿವೆ ಸೇರುತ್ತಿದೆ. ಪ್ರತಿವರ್ಷ ಇಳಿಜಾರಿನಲ್ಲಿ ಸೇರುವ ತೋಟದ ಪ್ರದೇಶವು ಹಳ್ಳದಂತಾಗುತ್ತಿದೆ. 2021 ರಿಂದ ಆರಂಭವಾಗಿರುವ ಚಂದ್ರಶೇಖರ ಅವರ ತೋಟದ ಬಹುಪಾಲು ವರ್ಷವರ್ಷ ಅಷ್ಟಷ್ಟೇ ಕುಸಿದು ಈಗಾಗಲೇ ಕೊಳ್ಳದಂತಾಗಿದ್ದು, ಉಳಿದ ತೋಟದ ಅಳತೆಗಾಗಲೀ, ನಿರ್ವಹಣೆಗಾಗಲೀ ಯಾರೂ ಹೆಜ್ಜೆ ಇಡಲೂ ಭಯ ಪಡುತ್ತಿದ್ದಾರೆ. ಚಂದ್ರಶೇಖರ ಕುಟುಂಬದ ಜೀವನಾಧಾರವಾಗಿದ್ದ ತೋಟವೇ ಕುಸಿಯುತ್ತಿರುವುದರಿಂದ ಮುಂದಿನ ದಿನಗಳ ಜೀವನ ನಿರ್ವಹಣೆಯ ಕುರಿತು ಆತಂಕಿತರಾಗಿದ್ದಾರೆ.

ಈವರೆಗೆ ಕುಸಿತಗೊಂಡಿರುವ ಒಂದೂವರೆ ಎಕರೆಯಷ್ಟು ಭೂಮಿಗೆ ಸರ್ಕಾರದಿಂದ ಕೇವಲ ಒಂದು ರೂಪಾಯಿ ಮಾತ್ರ ಪರಿಹಾರ ಬಂದಿದ್ದು, ಆಶ್ಚರ್ಯ ಮೂಡಿಸಿದೆ. ಈಗ ಮತ್ತೆ ಕುಸಿತವಾಗಿರುವುದರಿಂದ ಮುಂದೆ ಏನು ಮಾಡಬೇಕು ಎನ್ನುವ ಪ್ರಶ್ನೆ ಚಂದ್ರಶೇಖರ ಅವರನ್ನು ಕಾಡುತ್ತಿದೆ.