ಶಿರಸಿ : ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿರುವ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗುಂದ ಸೀಮೆ, ಛಾಪಖಂಡ ಭಾಗಿಯ ಶಿಷ್ಯರು ಸಲ್ಲಿಸಿದ ಗುರು ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.
ಪ್ರತಿಯೊಂದಕ್ಕೂ ನಮ್ಮ ಮನಸ್ಸು ಮುಖ್ಯ ಕಾರಣ. ಅದನ್ನು ನಿಗ್ರಹಿಸಿದರೆ ಎಲ್ಲವನ್ನೂ ನಿಗ್ರಹಿಸುವ ಸಾಮರ್ಥ್ಯ ನಮ್ಮಲ್ಲಿ ಬರುತ್ತದೆ. ನಮ್ಮನ್ನು ಧರ್ಮಾಚರಣೆಯಲ್ಲಿ ತೊಡಗಿಸುತ್ತದೆ ಎಂದರು.
ಮಠಕ್ಕೆ ಬಂದು ಗುರುಗಳ ದರ್ಶನ ಮಾಡುವುದು ಮತ್ತು ಮಾರ್ಗದರ್ಶನ ಪಡೆಯುವುದು ನಮ್ಮ ಜೀವನದಲ್ಲಿ ತಪಸ್ಸಿನ ಸಂದೇಶವನ್ನು ಪಡೆಯಲು,ತಪಸ್ಸಿನ ಮಾರ್ಗದಲ್ಲಿ ಹೋಗುವುದನ್ನು ರೂಢಿಸಿಕೊಳ್ಳಲು.
ಲೋಕದಲ್ಲಿ ಪ್ರತಿಯೊಂದು ಪ್ರಾಣಿಗಳು ಅವರವರ ಇಂದ್ರಿಯಗಳ ಆಕರ್ಷಣೆಯಿಂದಾಗಲೇ ಅವು ತಮ್ಮ ಪ್ರಾಣವನ್ನು ಬಿಡುತ್ತಾರೆ. ಇಂದ್ರಿಯಗಳ ಆಕರ್ಷಣೆಯನ್ನು ತಡೆಗಟ್ಟುವಲ್ಲಿ ಪ್ರಯತ್ನ ಬೇಕು. ಅದನ್ನು ತಡೆಗಟ್ಟಿದರೆ ತಪಸ್ಸಾಗುತ್ತದೆ. ನಮ್ಮ ಜೀವನದ ನಿಶ್ರೇಯಸ್ಸಿಗೂ ಕಾರಣವಾಗುತ್ತದೆ ಎಂದರು.
ಇಂದ್ರಿಯಗಳನ್ನು ಹರಿದು ಬಿಟ್ಟರೆ ಅದು ನರಕ. ಮಾನಸಿಕ, ದೈಹಿಕ ಆರೋಗ್ಯ ಕೆಡುತ್ತದೆ. ಇಂದ್ರಿಯಗಳನ್ನು ಹರಿ ಬಿಡುವುದರಿಂದ ಪಾಪಗಳು ಹೆಚ್ಚುತ್ತವೆ. ಎಲ್ಲಾ ಪಾಪಗಳಿಗೂ ಮೂಲ ಕಾರಣ ಇಂದ್ರಿಯಗಳನ್ನು ಹರಿದು ಬಿಡುವುದೇ ಆಗಿದೆ. ಇಂದ್ರಿಯಗಳ ಆಕರ್ಷಣೆಯಿಂದ ಅನೇಕ ತಪ್ಪು ಕಾರ್ಯಗಳು ಆಗುತ್ತವೆ. ಅನೇಕ ದುಷ್ಟ ಕೆಲಸಗಳಿಗೂ ಇದೆ ಕಾರಣ ಎಂದ ಅವರು, ಆದ್ದರಿಂದ ಇಂದ್ರಿಯ ನಿಗ್ರಹ ಮಾಡಿಕೊಳ್ಳುವುದರ ಮೂಲಕ ತಪ್ಪಸ್ಸನ್ನು ಸಿದ್ಧಿಸಿಕೊಳ್ಳಬಹುದು ಎಂದರು. ಮೇಲ್ನೋಟಕ್ಕೆ ಸ್ವರ್ಗದ ಅನುಭವವಾದರೂ ಅದು ಶಾಶ್ವತವಲ್ಲ. ಆದರೆ ನಿಜವಾದ ಸ್ವರ್ಗ ಆನಂದದ ಅನುಭವ. ಮೇಲ್ನೋಟಕ್ಕೆ ಕಾಣುವ ಆನಂದದ ಅನುಭವ ಅಲ್ಲ ಎಂದರು. ಇಂದ್ರಿಯಗಳ ನಿಯಮವೇ ತಪಸ್ಸು, ಸ್ವರ್ಗ, ಸಿದ್ಧಿ.
ಇಂದ್ರಿಯಗಳ ನಿಗ್ರಹವನ್ನು ಸಂಪಾದಿಸಿಕೊಳ್ಳಲು ಬೆಳಿಗ್ಗೆ ಮಧ್ಯಾನ್ಹ ಸಂಜೆ ಸಕಾಲದಲ್ಲಿ ಅನುಷ್ಠಾನಕ್ಕೆ ತೊಡಗುವುದು ಒಳ್ಳೆಯ ಸಾಧನ ಎಂದರು. ಸಂಧ್ಯಾಕಾಲದಲ್ಲಿ ಉತ್ತಮ ಆಚರಣೆ ಇಟ್ಟುಕೊಳ್ಳಬೇಕು, ಅನುಷ್ಠಾನಕ್ಕೆ ತೊಡಗಬೇಕು. ಸಂಧ್ಯಾಕಾಲದಲ್ಲಿ ಜಪ ಧ್ಯಾನ ಪೂಜೆ ಮಾಡಿದರೆ ಮನಸ್ಸು ಬೇಗ ಹಿಡಿತಕ್ಕೆ ಸಿಕ್ಕುತ್ತದೆ. ಮನಸ್ಸನ್ನು ನಿಗ್ರಹ ಮಾಡುಲು ಈ ಕಾಲ ಉತ್ತಮ ಕಾಲ. ಆದ್ದರಿಂದ ಪ್ರತಿಯೊಬ್ಬರು ಈ ಕಾಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಶಿಸಿದರು.
ಈ ವೇಳೆ ಕಿರಿಯ ಶ್ರೀಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ನೀಡಿದ್ದರು. ಸೀಮಾ ಅಧ್ಯಕ್ಷ ದತ್ತಾತ್ರೇಯ ಹೆಗಡೆ ತಮ್ಮಣಗಿ, ಶಿವಾನಂದ ಪಾಟೀಲ, ಮಾತೃಮಂಡಳಿಯ ಪ್ರಮುಖರಾದ ಸೀತಾ ದಾನಗೇರಿ, ವಿಶಾಲಾಕ್ಷಿ ಭಟ್ ಪಟೋಳಿ ಉಪಸ್ಥಿತರಿದ್ದರು.
ಮನಸ್ಸು ಒಂದನ್ನು ನಿಗ್ರಹಿಸಿದರೆ ಉಳಿದೆಲ್ಲ ಇಂದ್ರಿಯಗಳು ನಿಗ್ರಹಕ್ಕೆ ಬರುತ್ತದೆ.
ಇಂದಿನ ಕಾಲದಲ್ಲಿ ಅನೇಕ ಮನೆಗಳಲ್ಲಿ ಸಂಧ್ಯಾವಂದನೆ ದೇವರ ಪೂಜೆಗಳನ್ನು ಬಿಡುತ್ತಿದ್ದಾರೆ ಅದು ಸರಿಯಲ್ಲ.
ಸ್ವರ್ಣವಲ್ಲೀ ಶ್ರೀ