ಬೆಳಗಾವಿ, ಆಗಸ್ಟ್.03: ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳ ಅಬ್ಬರಕ್ಕೆ ಪ್ರವಾಹ ಎದುರಾಗಿದೆ. ಮನೆ, ಮಠಗಳು ಮುಳುಗಿದ್ದು ಜನರು ಬೀದಿಗೆ ಬಿದ್ದಿದ್ದಾರೆ. ಇನ್ನು ಪ್ರವಾಹದ ಹೆಸರಲ್ಲೂ ಅಧಿಕಾರಿಗಳು ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಭಾರಿ ಅನುಮಾನಕ್ಕೆ ಎಡೆ ಮಾಡಿದೆ.
ಸಂತ್ರಸ್ತರ ಹೆಸರನ್ನು ನಮೂದಿಸಿ ಕಾಳಜಿ ಕೇಂದ್ರ ತೆರೆದಿದ್ದೇವೆ ಅಂತ ಅಧಿಕಾರಿಗಳು ದಾಖಲೆ ಸೃಷ್ಟಿಸಿದ್ದು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ರೆ ಕಾಳಜಿ ಕೇಂದ್ರ ಖಾಲಿ ಖಾಲಿಯಾಗಿವೆ. ಸಂತ್ರಸ್ತರ ಹೆಸರಲ್ಲೂ ಅಧಿಕಾರಿಗಳು ಲಕ್ಷಾಂತರ ಹಣ ದೋಚುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಗಾಂವಠಾಣದಲ್ಲಿ ಕಾಳಜಿ ಕೇಂದ್ರ ತೆರೆದಿದ್ದೇವೆ ಎಂದು ಅಧಿಕಾರಿಗಳು ರಿಪೋರ್ಟ್ ನೀಡಿದ್ದಾರೆ.
ಗಾಂವಠಾಣದ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರೆ ತೆರೆಯಲಾಗಿದ್ದು 60 ಕುಟುಂಬಗಳು, 35 ಮಕ್ಕಳು ಸೇರಿ 261 ಜನ ಕಾಳಜಿ ಕೇಂದ್ರದಲ್ಲಿದ್ದಾರೆ ಎಂದು ಮಾಹಿತಿ ಹಾಕಿ ರಿಪೋರ್ಟ್ ರೆಡಿ ಮಾಡಲಾಗಿದೆ. ಆದರೆ ಶಾಲೆ ಬಳಿ ಹೋಗಿ ನೋಡಿದರೆ ಯಾವುದೇ ಕಾಳಜಿ ಕೇಂದ್ರಗಳು ಕಂಡು ಬಂದಿಲ್ಲ. ಒಬ್ಬೇ ಒಬ್ಬ ಸಂತ್ರಸ್ತ ಹಾಗೂ ಕುಟುಂಬದವರು ಕಾಣಿಸಿಲ್ಲ. ಜನರಿಗೆ ಸೂರಿನ ಚಿಂತೆಯಾದ್ರೆ ಅಧಿಕಾರಿಗಳಿಗೆ ತಿಂದು ತೇಗುವ ಚಿಂತೆಯಾಗಿದೆ. ಅಥಣಿ ಸೇರಿ ಹಲವು ಕಡೆ ನೆರೆ ಸಂತ್ರಸ್ತರು ಬೀದಿಯಲ್ಲಿದ್ರೇ. ನೆರೆ ಸಂತ್ರಸ್ತರ ಹೆಸರಿನ ಮೇಲೆ ಭ್ರಷ್ಟಾಚಾರಕ್ಕೆ ಇಳಿದ ಅಧಿಕಾರಿಗಳ ಕಳ್ಳಾಟ ಬಯಲಾಗುತ್ತಿದೆ. ಆದಷ್ಟು ಬೇಗ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂರಿಲ್ಲದೆ ನರಳುತ್ತಿರುವ ಸಂತ್ರಸ್ತರಿಗೆ ಆಸರೆ ಆಗಬೇಕಿದೆ.