ಹ್ಯಾಟ್ರಿಕ್​ ಪದಕ ತಪ್ಪಿಸಿಕೊಂಡ ಮನು ಭಾಕರ್​; 4ನೇ ಸ್ಥಾನಕ್ಕೆ ತೃಪ್ತಿ

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಹ್ಯಾಟ್ರಿಕ್​ ಪದಕ ನಿರೀಕ್ಷೆಯಲ್ಲಿದ್ದ ಮನು ಭಾಕರ್​ಗೆ ನಿರಾಸೆಯಾಗಿದೆ. ಇಂದು ನಡೆದ 25 ಮೀ. ಪಿಸ್ತೂಲ್​ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅವರು ಐತಿಹಾಸಿಕ ಪದಕ ಗೆಲ್ಲುವ ಅವಕಾಶವೊಂದನ್ನು ಕಳೆದುಕೊಂಡರು. ಪದಕ ಗೆಲ್ಲುತ್ತಿದ್ದರೆ ವೈಯಕ್ತಿಕವಾಗಿ ಒಂದೇ ಆವೃತ್ತಿಯಲ್ಲಿ ಹಾಗೂ ಒಟ್ಟಾರೆಯಾಗಿ 3 ಒಲಿಂಪಿಕ್ಸ್​ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆ ಬರೆಯಬಹುದಿತ್ತು.

ಫೈನಲ್​ ಹಂತದ ಮೊದಲ ಸುತ್ತಿನಲ್ಲಿ 6 ಅಂಕ ಗಳಿಸಿ 4ನೇ ಸ್ಥಾನಿಯಾದ ಭಾಕರ್​ ಆ ಬಳಿಕದ ಸುತ್ತಿನಲ್ಲಿ ಪ್ರಗತಿ ಸಾಧಿಸಿ 2ನೇ ಸ್ಥಾನದೊಂದಿಗೆ ಈ ಸುತ್ತು ಮುಗಿಸಿದರು. 2ನೇ ಸುತ್ತಿನಲ್ಲಿ ಒಮ್ಮೆ 6ನೇ ಸ್ಥಾನಕ್ಕೆ ಕುಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಮತ್ತೆ ಯಶಸ್ಸು ಸಾಧಿಸಿದರು. ಆದರೆ ಅಂತಿಮ ಹಂತದಲ್ಲಿ 28 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಯಾಂಗ್ ಜಿನ್ ಚಿನ್ನದ ಪದಕ ಗೆದ್ದರು. ಆತಿಥೇಯ ದೇಶದ ಕ್ಯಾಮಿಲ್ಲೆ ಬೆಳ್ಳಿ, ಹಂಗೇರಿಯ ಕಂಚು ಗೆದ್ದರು.

22 ವರ್ಷದ ಮನು ಭಾಕರ್ ಇದಕ್ಕೂ ಮುನ್ನ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲೂ ಕಂಚಿನ ಪದಕ ಜಯಿಸುವ ಮೂಲಕ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. ಶುಕ್ರವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾಕರ್​ ಒಟ್ಟು 590 ಅಂಕ ಗಳಿಸುವ ಮೂಲಕ 2ನೇ ಸ್ಥಾನಿಯಾಗಿ ಫೈನಲ್​ ಪ್ರವೇಶಿಸಿದ್ದರು. ಪ್ರಿಸಿಷನ್​ ಸುತ್ತಿನಲ್ಲಿ 294 ಅಂಕ(97,98,99) ಗಳಿಸಿದರೆ ರ್ಯಾಪಿಡ್​ ಸುತ್ತಿನಲ್ಲಿ 296 ಅಂಕ(100,98,98) ಕಲೆಹಾಕಿದ್ದರು.

ಭಾಕರ್​ ಬಳಿಕ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟು ಸುಶೀಲ್​ ಕುಮಾರ್​(2008 ಕಂಚು, 2012 ಬೆಳ್ಳಿ) ಮತ್ತು ಪಿ.ವಿ. ಸಿಂಧು(2016 ಬೆಳ್ಳಿ, 2021 ಕಂಚು) ಅವಳಿ ಪದಕ ಗೆದ್ದ ಇಬ್ಬರು ಭಾರತೀಯ ಕ್ರೀಡಾಪಟುಗಳು.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್​ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಅಂದಿನ ಸೋಲಿನಿಂದ ಮನನೊಂದು ಶೂಟಿಂಗ್​ಗೆ ವಿದಾಯ ಹೇಳಲು ಬಯಸಿದ್ದ ಮನು ತಂದೆಯ ಆತ್ಮವಿಶ್ವಾಸದ ಮಾತಿನಂತೆ ಶೂಟಿಂಗ್​ನಲ್ಲಿ ಮುಂದುವರಿದಿದ್ದರು. ಈ ಬಾರಿ ಪ್ಯಾರಿಸ್​ನಲ್ಲಿ 2 ಪದಕ ಗೆದ್ದು ಭಾರತೀಯ ಒಲಿಂಪಿಕ್ಸ್​ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.