ಬೆಂಗಳೂರು, ಜುಲೈ 29: ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಇಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್ ಹಾಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ಭೇಟಿ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅವ್ಯವಸ್ಥೆ ಅನಾವರಣವಾಗಿದೆ. ಜೊತೆಗೆ ರೋಗಿಗಳ ಸಮಸ್ಯೆಯನ್ನು ಆಲಿಸಿದ್ದಾರೆ.
ಸಾಕಷ್ಟು ದೂರು ಬಂದಿದ್ದ ಹಿನ್ನೆಲೆ ದಿಢೀರ್ ಭೇಟಿ ಎಂದ ಬಿಎಸ್ ಪಾಟೀಲ್
ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ರೋಗಿಯೊಬ್ಬರು ಬಿದ್ದು ನರಳುತ್ತಿದ್ದರೂ ಯಾರು ಚಿಕಿತ್ಸೆ ನೀಡುತ್ತಿರಲಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡದೆ ವೈದ್ಯರು ಸ್ಪಂದಿಸದ ಬಗ್ಗೆ ದೂರು ಬಂದಿದ್ದವು. ಈ ಬಗ್ಗೆ ಸಾಕಷ್ಟು ದೂರು ಬಂದಿದ್ದ ಹಿನ್ನೆಲೆ ದಿಢೀರ್ ಭೇಟಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಮೆಡಿಸನ್ ಕೊಟ್ಟಿರುವ ಬಗ್ಗೆ ರಿಜಿಸ್ಟರ್ನಲ್ಲಿ ಎಂಟ್ರಿ ಮಾಡುತ್ತಿರಲಿಲ್ಲ. ಮೂವರನ್ನು ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಂಡಿದ್ದಾರೆ. ನಾವು ಭೇಟಿ ನೀಡಿದ ವೇಳೆ ಎಮರ್ಜೆನ್ಸಿ ಮೆಡಿಷನ್ ಇಲ್ಲಾ ಅಂತಿದ್ದಾರೆ. ಕಾಂಟ್ರ್ಯಾಕ್ಟರ್ ಬಿಲ್ ಪೆಡಿಂಗ್ ಇರೋದ್ರಿಂದ ಸಪ್ಲೈ ಮಾಡಿಲ್ಲ ಎಂದಿದ್ದಾರೆ.
ಓಪಿಡಿಯಲ್ಲಿ ಎಲ್ಲಾ ಡಾಕ್ಟರ್ ಇರಲಿಲ್ಲ, ಪಿಜಿ ಡಾಕ್ಟರ್ ಮಾತ್ರ ಇದ್ದಾರೆ. ಸೂಪರಿಂಡೆಂಟ್ ಕರೆಸಿದ್ವಿ, ಆಸ್ಪತ್ರೆಯ ಕೆಲ ವೈದ್ಯಾಧಿಕಾರಿಗಳು ಬಂದರು. ಇನ್ನೂ ಕೆಲವರು ರಜೆಯಲ್ಲಿದ್ದಾರೆ ಅಂತಾ ಸೂಪರಿಂಡೆಂಟ್ ಹೇಳಿದರು. ರೋಗಿಗಳಿಗೆ ಆಸ್ಪತ್ರೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಗಬೇಕು ಎಂದು ಹೇಳಿದ್ದಾರೆ.