ಕಾರವಾರ, ಜುಲೈ 29: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಘಟನೆ ನಡೆದು ಒಂದಲ್ಲ ಎರಡಲ್ಲ ಬರೋಬ್ಬರಿ 13 ದಿನ ಕಾರ್ಯಾಚರಣೆ ನಡೆದಿತ್ತು. ಗಂಗಾವಳಿ ನದಿಯ ಆರ್ಭಟದ ಮುಂದೆ ತಜ್ಞರು ಮಂಡಿಯೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಗಂಗಾವಳಿ ನದಿಯ ಇನ್ನೊಂದು ದಡದ ಉಳುವರೆ ಗ್ರಾಮದಲ್ಲಿ ಭಾರೀ ಹಾನಿ ಉಂಟಾಗಿದ್ದು ಸಾವು ನೋವು ಕೂಡ ಸಂಭವಿಸಿವೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನಿಬ್ಬರು ಮಕ್ಕಳು ಸೇರಿದಂತೆ ಐವರನ್ನು ಬಚಾವ್ ಮಾಡಿದ ಹುವಾ ಗೌಡ ಅವರ ಮಾತು ಕೇಳಿದರೆ ಮೈ ಜುಮ್ಮೆನಿಸುತ್ತೆ.
ಘಟನೆಯಲ್ಲಿ ಬಚಾವ್ ಆದ ಹುವಾ ಗೌಡ ಪ್ರತಿಕ್ರಿಯಿಸಿದ್ದು, ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ ಮಕ್ಕಳು ಒಮ್ಮೆಲೆ ನದಿಯ ರಭಸಕ್ಕೆ ತೇಲಿಕೊಂಡು ಹೋದರು. ಅಂದಾಜು 50 ಮೀಟರ್ ಕೊಚ್ಚಿಕೊಂಡು ಹೋಗುತ್ತಿದ್ದರು. ಮಕ್ಕಳು ಗಿಡಗಂಟಿಗಳಿಗೆ ಸಿಕ್ಕಿಹಾಕಿಕೊಂಡರು. ಆವಾಗ ನಾನು ಕೂಡ ತೇಲಿ ಹೋಗುತ್ತಿದೆ. ಆಗ ಮಕ್ಕಳು ನನ್ನ ಕೈಗೆ ಸಿಕ್ಕಿದರು. ಎಲ್ಲರನ್ನು ಕೂಡ ಅಪ್ಪಿ ಹಿಡಿದುಕೊಂಡೆ. ಇಬ್ಬರು ನನ್ನ ಮಕ್ಕಳು, ಮೂವರು ನನ್ನ ತಮ್ಮನ ಮಕ್ಕಳು. ಎಲ್ಲರನ್ನು ಬಚಾವ್ ಮಾಡಿ ದಡಕ್ಕೆ ತಂದೆ ಎಂದು ಹೇಳಿದ್ದಾರೆ.
ನೀರು ಎಷ್ಟೇ ರಭಸದಿಂದ ಬಂದರ ಜಗ್ಗದೆ ಮಕ್ಕಳನ್ನ ಅಪ್ಪಿಕೊಂಡರಂತೆ ಹುವಾ ಗೌಡ. ಇನ್ನು ಗುಡ್ಡ ಕುಸಿತದ ಭೀಕರತೆಯನ್ನ ಇನ್ನೊರ್ವ ಪ್ರತ್ಯಕ್ಷದರ್ಶಿ ಮಂಗೇಶ ಗೌಡ ಎಂಬುವವರು ವಿವರಿಸಿದ್ದು ಇತಿಹಾಸದಲ್ಲೇ ಇಂತ ಘಟನೆ ನೋಡಿಲ್ಲ ಎಂದಿದ್ದಾರೆ.
ನಿನ್ನೆ ಮಧ್ಯಾಹ್ನದಿಂದ ವಿಶೇಷ ಕಾರ್ಯಾಚರಣೆ ಸ್ಥಗಿತವಾಗಿದೆ. ಗಂಗಾವಳಿ ನದಿಯ ನೀರಿನ ರಭಸ ಹೆಚ್ಚಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತವಾಗಿದೆ. ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಮಾಡುವ ಡ್ರೋಣ ದೃಶ್ಯ ಲಭ್ಯವಾಗಿದೆ. ಅಪಾಯದ ಮಟ್ಟ ಮೀರಿ 10 ನಾಟ್ಸ್ನಲ್ಲಿ ಗಂಗಾವಳಿ ನದಿ ರಭಸವಾಗಿ ಹರಿಯುತ್ತಿದ್ದ ವಿಡಿಯೋ ಡ್ರೋಣ ಕಣ್ಣಲ್ಲಿ ಸೆರೆ ಹಿಡಿಯಲಾಗಿದೆ.
ನೌಕಾ ಸೇನೆ, ಭೂ ಸೇನೆ, ನಿವೃತ್ತ ಸೇನಾಧಿಕಾರಿ ವಿಶೇಷ ತಂಡ ಹಾಗೂ ಮುಳುಗು ತಜ್ಞರು ಈ ಎಲ್ಲರ ನಿರಂತರ ಪರಿಶ್ರಮ ಗಂಗಾವಳಿ ನದಿಯ ಮುಂದೆ ನಡೆಯಲಿಲ್ಲ. ಕಳೆದ ಐದು ದಿನಗಳಿಂದ ನಿತ್ಯ ವಿಶೇಷ ಕಾರ್ಯಾಚರಣೆ ಮಾಡಲಾಯಿತು. ಶಿರೂರು ಗ್ರಾಮದ ಜಗನ್ನಾಥ ನಾಯ್ಕ್, ಲೊಕೇಶ್ ನಾಯ್ಕ್ ಹಾಗೂ ಲಾರಿ ಚಾಲಕ ಅರ್ಜುನ್ ಕಣ್ಮರೆಯಾದ ಮೂವರು ಗಂಗಾವಳಿ ನದಿಯಲ್ಲಿ ಸಿಗಲೆಯಿಲ್ಲ. ನೀರಿನ ಅಬ್ಬರ ಕಡಿಮೆ ಆಗುವವರೆಗೆ ಏನು ಮಾಡುವುದಕ್ಕೆ ಆಗಲ್ಲವೆಂದು ತಜ್ಞರು ಹೇಳಿದ್ದಾರೆ. ಇಂದು ಬೋಟ್ ಮೂಲಕ ನದಿಯ ದಡದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಆದರೆ ವಿಶೇಷ ಕಾರ್ಯಾಚರಣೆ ಯಾವುದು ಕೂಡ ಇಂದು ಮಾಡಿಲ್ಲ.