ಬೆಂಗಳೂರು, ಜುಲೈ 27: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಆದರೆ, ಇದೊಂದು ತಡೆಯಲಾಗದ ನೈಸರ್ಗಿಕ ವಿಕೋಪ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿಪಾದಿಸಿದೆ.
ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸರ್ಕಾರಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಅದು ಕಾಮಗಾರಿಗಳ ವಿಧಾನದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಹೆಚ್ಚಿನ ಹಾನಿಯನ್ನು ತಡೆಯಲು ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಸೂಚಿಸಿದೆ.
ಕಾಮಗಾರಿಯಿಂದ ನೈಸರ್ಗಿಕ ಒಳಚರಂಡಿ ಹರಿವಿಗೆ ತೊಂದರೆಯಾಗಿದೆ. ಇಳಿಜಾರು ಪ್ರದೇಶ ಮತ್ತು ಎಡ ಪಾರ್ಶ್ವವು ರಚನಾತ್ಮಕವಾಗಿ ವಿರೂಪಗೊಂಡಿದೆ. ಇಳಿಜಾರು ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ ಎದ್ದು ಕಾಣಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬುದಾಗಿ ‘ಡೆಕ್ಕನ್ ಹೆರಾಲ್ಡ್’ ಪ್ರಕಟಿಸಿದೆ.
ಕಡಿಮೆ ಅವಧಿಯಲ್ಲಿ 503 ಮಿಮೀ ಮಳೆಯಾಗಿರುವುದು ಕೂಡ ಘಟನೆಗೆ ಕಾರಣ ಹೌದೆಂಬುದನ್ನು ಭೂವೈಜ್ಞಾನಿಕ ಸಮೀಕ್ಷೆ ವರದಿ ಒಪ್ಪಿಕೊಂಡಿದೆ. ಆದರೆ, ಇದರ ಹೊರತಾಗಿಯೂ ಮಳೆ ನೀರಿನ ಹರಿವಿನ ನೈಸರ್ಗಿಕ ತಡೆಗಳು ಮಾಯವಾಗಿರುವುದು ಮತ್ತು ಕಡಿದಾದ ಇಳಿಜಾರಿನ ಪ್ರದೇಶ ಸೃಷ್ಟಿಯಾಗಿರುವುದು ಭೂಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ಕಾಮಗಾರಿಯ ಸಮಸ್ಯೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೆಲವು ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಾದ ಅಗತ್ಯವಿದೆ. ಈಗ ಜನರ ಜೀವ ಕಳೆದುಕೊಂಡಾಗಿದೆ. ಈ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ. ಇದು ಎನ್ಎಚ್ಎಐ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ, ನಾವು ಪ್ರಾದೇಶಿಕ ಪ್ರಾಧಿಕಾರದ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಸಮಸ್ಯೆ ಬಗೆಹರಿಯುವವರೆಗೆ ಆ ಬಗ್ಗೆ ಗಮನ ಸೆಳೆಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.