ಹಂಪಿಯ ವಿರೂಪಾಕ್ಷ ದೇವಸ್ಥಾನ ಹೊರತುಪಡಿಸಿ ಹಲವು ದೇವಾಲಯಗಳು ಮುಳುಗಡೆ

ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ, ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯದಿಂದ ನದಿಗೆ ಅಪಾರ ನೀರು ಬಿಡಲಾಗುತ್ತಿದೆ. ಡ್ಯಾಂನಿಂದ ಈಗ ನದಿಗೆ ಲಕ್ಷ ಕ್ಯೂಸೆಕ್​​ನಷ್ಟು ನೀರು ಬಿಡಲಾಗುತ್ತಿದೆ. ಇದರಿಂದ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ಜಲಾಶಯದಿಂದ 1.17 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟ ಹಿನ್ನಲೆಯಲ್ಲಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ‌ ಹರಿಯುತ್ತಿದೆ. ನದಿಯಲ್ಲಿ ನೀರಿನ ರಭಸ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಂಪಿಯಿಂದ ವಿರಾಪುರ ಗಡ್ಡೆಗೆ ಬೋಟ್ ಸಂಪರ್ಕ ಸ್ಥಗಿತವಾಗಿದೆ.

ನದಿಯಲ್ಲಿ ಹಂಪಿಯ ಹಲವು ಐತಿಹಾಸಿಕ ಸ್ಮಾರಗಳು ಮುಳುಗಡೆಯಾಗಿವೆ. ಹಂಪಿಯ ವಿಧಿ – ವಿಧಾನ ಮಂಟಪ, ಪುರಂದರದಾಸ ಮಂಟಪಗಳು ಮುಳುಗಡೆಯಾಗಿವೆ.

ಹಂಪಿಯ ಮುಖ್ಯ ದೇವಸ್ಥಾನವಾದ ವಿರೂಪಾಕ್ಷೇಶ್ವರನ ದರ್ಶನ ಪಡೆದು ಅಲ್ಲಿಂದ ಸಾಲು ಮಂಟಪಗಳ ಬೀದಿಯಲ್ಲಿ ಸಾಗಿ ಅಲ್ಲಿಂದ ಕೋದಂಡರಾಮ ದೇವಸ್ಥಾನ, ಸೀತಾಸೆರಿಗೂ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ಹಲವು ದೇವಸ್ಥಾನಗಳಿಗೆ ಹೋಗುವ ಮಾರ್ಗ ಸಂಪೂರ್ಣ ಜಲಾವೃತವಾಗಿದೆ.

ಪ್ರವಾಸಿಗರು ಈ ಮಾರ್ಗ ಬದಲಿಗೆ, ನೇರವಾಗಿ ಮುಖ್ಯ ವೇದಿಕೆ ದಾರಿಯಲ್ಲಿ 3 ಕಿಮೀ ಕಾಲ್ನಡಿಗೆಯಲ್ಲಿ ಸಾಗಿ ಉಳಿದ ದೇವಸ್ಥಾನಗಳ ದರ್ಶನ ಪಡೆಯಬೇಕಾಗಿದೆ.

ಕಂಪ್ಲಿ ಹಾಗೂ ಸಿರುಗುಪ್ಪ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಕಂಪ್ಲಿ ಸೇತುವೆ ಮುಳುಗಡೆಯಾಗಿ, ಕಂಪ್ಲಿ-ಗಂಗಾವತಿ ಸಂಪರ್ಕ ಬಂದ್​ ಆಗಿದೆ. ಸಿರುಗುಪ್ಪ ತಾಲೂಕಿನ ವಿವಿಧೆಡೆ ಜಮೀನಿಗೆ ನೀರು ನುಗ್ಗಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಟಿಬಿ ಡ್ಯಾಂನಿಂದ ಹೊರಗೆ ಬಿಟ್ಟರೆ ಕಂಪ್ಲಿ ಕೋಟೆ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ನದಿಗೆ ಇಳಿಯದಂತೆ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ.