ಬೆಂಗಳೂರು, ಜುಲೈ.20: ಫೋನ್ ಪೇ ಅನ್ ಇನ್ಸ್ಟಾಲ್ ಮಾಡಿ ಫೋನ್ ಪೇ (Phonepe) ವಿರುದ್ಧ ಸಮರ ಸಾರಲು ಕನ್ನಡಿಗರು ಮುಂದಾಗಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಮಸೂದೆಗೆ ಖಾಸಗಿ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆ ಅದನ್ನು ತಡೆ ಹಿಡಿಯಲಾಗಿದ್ದು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರವಾಗಿ ಫೋನ್ ಪೇ ಸಿಇಒ ಸಮೀರ್ ನಿಗಮ್ (Sameer Nigam) ಕಾಮೆಂಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿರುವ ಕನ್ನಡಿಗರು ಫೋನ್ ಪೇ ಸಿಇಒಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ Boycottphonepay ಅಭಿಯಾನ ಶುರುವಾಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲೇ Phonepe ಸಿಇಎ ಸಮೀರ್ ನಿಗಮ್ ಅಸಮಾಧಾನ ಹೊರ ಹಾಕಿದ್ದರು. ಕನ್ನಡಪರ ಸಂಘಟನೆಗಳು Phonepe ವಿರುದ್ಧ ಆಕ್ರೋಶ ಹೊರ ಹಾಕಿದ್ದು #Boycott ಅಭಿಯಾನ ಆರಂಭಿಸಿವೆ. ಕನ್ನಡಿಗರು ಈ ಅಪ್ಲಿಕೇಷನ್ ಬಳಸಬೇಡಿ ಎಂದು ಕರೆ ನೀಡಲಾಗಿದೆ. ಫೋನ್ ಪೇ ವಿರುದ್ಧ ಹೊರಾಟಕ್ಕೆ ಕನ್ನಡಿಗರು ಹಾಗೂ ಹೋರಾಟಗಾರರು ಮುಂದಾಗಿದ್ದಾರೆ.
ಫೋನ್ ಪೇಗೆ 1 ರೇಟಿಂಗ್ ನೀಡಿ ಮೊಬೈಲ್‌ನಿಂದ ಆ್ಯಪ್ ಡಿಲೀಟ್ ಮಾಡಿ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸಮೀರ್ ನಿಗಮ್ ಅವರೇ ನೀವು ಬೆಳೆಯಲು ಕರ್ನಾಟಕ ಬಹಳಷ್ಟು ಸಹಾಯ ಮಾಡಿದೆ, ನೀವು ನಿಮ್ಮ ವೃತ್ತಿ ಜೀವನವನ್ನು ಉತ್ತಮಗೊಳಿಸಲು ಬಂದಿದ್ದೀರಿ, ಬೆಂಗಳೂರನ್ನು ಬೆಳೆಸುವುದಕ್ಕೆ ಅಲ್ಲ. ಫೋನ್ ಪೇಗೆ ಗುಡ್ ಬೈ ಹೇಳುವ ಸಮಯ ಈಗ ಬಂದಿದೆ’ ಎಂದು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಫೋನ್ ಪೇ ಆ್ಯಪ್ ಅನ್ನು ಫೋನ್‌ನಿಂದ ಡಿಲೀಟ್ ಮಾಡುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
ಸಮೀರ್ ನಿಗಮ್ ಹೇಳಿದ್ದೇನು?
‘ನನಗೆ ಈಗ 46 ವರ್ಷ. 15 ವರ್ಷಕ್ಕಿಂತ ಹೆಚ್ಚು ಕಾಲ ಯಾವ ರಾಜ್ಯಗಳಲ್ಲಿಯೂ ಉಳಿದಿಲ್ಲ. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ನಿಯೋಜನೆ ಮಾಡುತ್ತಿದ್ದರು. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?. ನಾನು ಒಂದು ಸಂಸ್ಥೆಯನ್ನು ಕಟ್ಟಿದ್ದೇನೆ, ದೇಶದಾದ್ಯಂತ 25 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳು ಅವರ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?’ ಎಂದು ಬರೆದುಕೊಂಡಿದ್ದರು.