ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ – ಶಿರಸಿ -ಕುಮಟಾ ಹೆದ್ದಾರಿ ಬಂದ್‌

ಕುಮಟಾ ಜುಲೈ 04 : ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಅಬ್ಬರದ ಮಳೆ ಸುರಿಯುತಿದ್ದು ಕುಮಟಾ, ಶಿರಸಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಶಿರಸಿ-ಕುಮಟಾ ರಸ್ತೆಯ ಕತಗಾಲಿನ ಬಳಿ ಚಂಡಿಕಾ ಹೊಳೆಯೊಂದು ತುಂಬಿ ಹರಿದ ಪರಿಣಾಮ ಸಂಚಾರ ಬಂದ್ ಆಗಿದೆ.

ವರುಣಾರ್ಭಟಕ್ಕೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಕುಮಟಾ ತಾಲೂಕಿನ ಕತಗಾಲ್‌ ಬಳಿಯ ಚಂಡಿಯಾ ಹೊಳೆಯೊಂದು ತುಂಬಿ ಹರಿದ ಪರಿಣಾಮ ವಾಹನ ಸಂಚಾರ ಸ್ಥಗೀತಗೊಳಿಸಲಾಗಿದೆ. ಇನ್ನು ಇದೇ ಮಾರ್ಗದಲ್ಲಿ ಸಂಚರಿಸುತ್ತಿರುವ ಶಿವಕುಮಾರ್ ಬಸ್ ನೀರಿನ ಮಧ್ಯೆ ಸಿಲುಕಿಕೊಂಡಿದ್ದು ಪ್ರಯಾಣಿಕರು ಬಚಾವ್ ಆಗಿದ್ದಾರೆ.

ಇನ್ನು ಕುಮಟಾ ಭಾಗದ ಬರ್ಗಿಯಲ್ಲಿ ಮಳೆಯಿಂದಾಗಿ ಗುಡ್ಡದಿಂದ ಹರಿದುಬಂದ ನೀರು ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ನೀರು ಹೊಕ್ಕಿದ್ದು ಬರ್ಗಿ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯ ಭಾಗವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತಿದೆ. ಅಕ್ಟೋಬರ್ 15ರಿಂದ 2025ರ ಫೆಬ್ರುವರಿ 25ರ ವರೆಗೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಹೊರಡಿಸಿದ್ದಾರೆ.

ಭಾರತ ಮಾಲಾ ಯೋಜನೆಯಡಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿರಸಿ-ಕುಮಟಾ-ಬೇಲೆಕೇರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾರ್ಯವನ್ನು ಕಳೆದ ನಾಲ್ಕು ವರ್ಷಗಳಿಂದ ಕೈಗೊಂಡಿದೆ. ಈಗಾಗಲೇ ಸಿಮೆಂಟ್ ರಸ್ತೆ ನಿರ್ಮಾಣ ಭಾಗಶಃ ಮುಕ್ತಾಯವಾಗಿದ್ದು, ಪ್ರಮುಖ ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹೆದ್ದಾರಿ ವಿಸ್ತರಣೆ ಕಾಮಗಾರಿ ಸಮರ್ಪಕವಾಗಿ ನಡೆಸಲು ಶಿರಸಿ-ಕುಮಟಾ ನಡುವೆ ವಾಹನ ಸಂಚಾವರವನ್ನು ನಿರ್ಬಂಧಿಸಿ 2023 ರಲ್ಲಿಯೇ ಆದೇಶವಾಗಿತ್ತು. ಆದರೆ, ಆದೇಶ ಜಾರಿಯಾಗಿರಲಿಲ್ಲ. ಯಾವುದೇ ಕಾರಣಕ್ಕೂ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡದಂತೆ ಉಸ್ತುವಾರಿ ಸಚಿವರು ಆದೇಶ ಹೊರಡಿಸಿದ್ದರು.ಆದರೆ, ಇದರಿಂದ ಕಾಮಗಾರಿ ಮಾಡಲು ವಿಳಂಬವಾಗುತ್ತಿರುವ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರದ ಯೋಜನಾ ನಿರ್ದೇಶಕರು ನೀಡಿದ ಮನವಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈಗ ಮತ್ತೊಮ್ಮೆ ಸಂಚಾರ ನಿರ್ಬಂಧ ಆದೇಶ ಮಾಡಿದ್ದಾರೆ.

ಆದೇಶದಲ್ಲಿ ಗೊಂದಲ  ;

ಶಿರಸಿ-ಕುಮಟಾ ನಡುವೆ ವಾಹನ ಸಂಚಾರ ನಿರ್ಬಂಧಿಸಿದಲ್ಲಿ ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಿ ಜಿಲ್ಲಾಧಿಕಾರಿ ಅವರ ಜೂನ್ 25 ರ ಆದೇಶದಲ್ಲಿ ಬರೆಯಲಾಗಿದೆ. ಆದರೆ, ಅದರಲ್ಲಿ ಗೊಂದಲವಿದೆ. ಶಿರಸಿ- ಕುಮಟಾ ಸಿದ್ದಾಪುರಕ್ಕೆ ರಾಜ್ಯ ಹೆದ್ದಾರಿ 69 ರಲ್ಲಿ ಲಘು ವಾಹನ ಸಂಚರಿಸಬಹುದು ಎಂದು ಒಂದೆಡೆ ಬರೆಯಲಾಗಿದ್ದರೆ. ಇನ್ನೊಂದೆಡೆ ಶಿರಸಿ- ಕುಮಟಾ ಸಿದ್ದಾಪುರ ರಾಷ್ಟ್ರೀಯ ಹೆದ್ದಾರಿ 766ಇ ನಲ್ಲಿ ಲಘು ವಾಹನ ಸಂಚರಿಸಬಹುದು ಎಂದು ಬರೆಯಲಾಗಿದೆ ಆದೇಶ ಪತ್ರ ಓದಿದರೆ, ಶಿರಸಿ-ಕುಮಟಾ ನಡುವೆ ಲಘು ವಾಹನಕ್ಕೆ ಓಡಾಟಕ್ಕೆ ಅವಕಾಶವಿದೆಯೇ ಎಂಬ ಅನುಮಾನವೂ ಬರುವಂತಿದೆ.

ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಎಲ್ಲ ರೀತಿಯ ವಾಹನಗಳು, ಹೊನ್ನಾವರ-ಮಾವಿನಗುಂಡಿ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳು ಸಂಚರಿಸಬಹುದು ಎಂದು ಬರೆಯಲಾಗಿದೆ.

ಒಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ…