371ಜೆ ವಿಶೇಷ ಸ್ಥಾನಮಾನಕ್ಕೆ ಧಕ್ಕೆ ತಂದ್ರೆ ಪ್ರತ್ಯೇಕ ರಾಜ್ಯ: ಸ್ವಾಮೀಜಿ ಪರ ನಿಂತ ಯತ್ನಾಳ್

ವಿಜಯಪುರ, ಜುಲೈ 01: ಕಲ್ಯಾಣ ಕರ್ನಾಟಕ ಭಾಗದ ಜನ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. 371ಜೆ ವಿಶೇಷ ಸ್ಥಾನಮಾನ ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಅಲ್ಲಿರುವ ಜನರಿಗೆ 371ಜೆ ಅನುಕೂಲತೆಗಳು ಸಿಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 371ಜೆ ವಿಶೇಷ ಸ್ಥಾನಮಾನಕ್ಕೆ ಧಕ್ಕೆ ತಂದರೆ ಪ್ರತ್ಯೇಕ ರಾಜ್ಯ ಕೇಳುತ್ತೇವೆ ಎಂಬ ತಡೋಳ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಜಿ ಪರ  ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ 371ಜೆಗೆ ಯಾರೂ ವಿರೋಧ ಮಾಡಬಾರದು. ನಿಜಾಮರು ತಮ್ಮ ಕಾಲದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಿಂದೂ ದೇವಾಲಯಗಳನ್ನ ನಾಶ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಕಲಕೇರಿ, ಆಲಮೇಲವರೆಗೂ ನಿಜಾಂ ಬಂದಿದ್ದ. ಹೀಗಾಗಿ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕಕ್ಕೆ ಸೇರಿಸಬೇಕು ಎಂದು ಹೇಳಿದ್ದಾರೆ.

ಕೊಪ್ಪಳದವರೆಗೆ ಮಾತ್ರ ಹೈದರಾಬಾದ್​ನ​ ನಿಜಾಂ ಹೋಗಿದ್ದ. ಬಳ್ಳಾರಿಯ ಕೆಲವೆಡೆ ಬಂದಿದ್ದಾನೆಂದು ಕಲ್ಯಾಣ ಕರ್ನಾಟಕಕ್ಕೆ ಸೇರಿಸಿದ್ದಾರೆ. ಅದೇ ರೀತಿ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕಕ್ಕೆ ಸೇರಿಸಬೇಕು ಎಂದಿದ್ದಾರೆ.

ಸಿಎಂ, ಡಿಸಿಎಂ ಯಾರನ್ನ ಮಾಡಬೇಕು ಅಂತ ವರಿಷ್ಠರು ನಿರ್ಧಾರ ಮಾಡ್ತಾರೆ

ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ಚಂದ್ರಶೇಖರ ಶ್ರೀಗಳ ಹೇಳಿಕೆಗೆ​ ಪ್ರತಿಕ್ರಿಯಿಸಿದ್ದು, ಯಾವುದೇ ಪಕ್ಷದಲ್ಲಿ ಯಾರನ್ನ ಸಿಎಂ ಮಾಡಬೇಕು, ಯಾರನ್ನ ರಾಜ್ಯಾಧ್ಯಕ್ಷ ಮಾಡಬೇಕೆಂದು ವರಿಷ್ಠರು ಶಾಸಕರು, ಮುಖಂಡರು ನಿರ್ಧಾರ ಮಾಡುತ್ತಾರೆ. ಸ್ವಾಮೀಜಿಗಳ ಕೆಲಸ ಏನು?, ಧರ್ಮದ ಕೆಲಸ. ಶ್ರೀಗಳು ಧರ್ಮದಿಂದ ನಡೆಯಿರಿ ಅಂತಾ ಹೇಳಬೇಕು ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕನ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಷ ಏನು ನಿರ್ಧಾರ ಮಾಡುತ್ತೋ ಅದಕ್ಕೆ ನಾನು ಬದ್ಧ. ಸಮರ್ಥವಾಗಿ ಸರ್ಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಬೇಕಿದೆ. ಅಮಿತ್ ಶಾಗೆ ಪತ್ರ ಬರೆದಿದ್ದೇನೆ, ಆ ರೀತಿ ಹೋರಾಟ ಮಾಡಬೇಕು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್‌ನಲ್ಲಿ ಪಿಐಎಲ್ ಹಾಕುತ್ತೇನೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಲೋಕಸಭಾ ಚುನಾವಣೆಗೆ ಮುನ್ನ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಮಾಜಿ ಸಂಸದ ಡಿಕೆ ಸುರೇಶ್​ ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು.