ಉಡುಪಿ, ಜುಲೈ 1: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಬೈಂದೂರು ತಾಲೂಕಿನಲ್ಲಿ ಮೂಲಭೂತ ಸೌಕರ್ಯ ಸಮಸ್ಯೆಗಳೇ ಹೆಚ್ಚಾಗಿರುವ ಕಾರಣ ತಾಲೂಕಿಗೆ ಈ ಅಪಖ್ಯಾತಿ ಬಂದಿದೆ. ತಾಲೂಕಿನ ಯಡೂರು ಕುಂಜ್ಞಾಡಿ ಸಮೀಪದ ಹಾರ್ಮಣ್ ಬಳಿ ಮಳೆಗಾಲ ಬಂತೆಂದರೆ ಸಾಕು, ನಿವಾಸಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಲ್ಲಿ ಕಾಲು ಸಂಕವೇ ದೈನಂದಿನ ಚಟುವಟಿಕೆಗಳಿಗೆ ಬಹು ಮುಖ್ಯ ಸಂಪರ್ಕ ಸೇತುವೆ. ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ದಿನ ಕಳೆಯುವ ಈ ಭಾಗದ ಜನರು ಮಳೆಗಾಲ ಬಂತಂದರೆ ಭಯದಲ್ಲಿ ದಿನದೂಡುತ್ತಾರೆ. ಪ್ರತಿ ಮಳೆಗಾಲದಲ್ಲೂ ಕೂಡ ಒಂದಲ್ಲ ಒಂದು ಅವಘಡಗಳು ಈ ಕಿರು ಸೇತುವೆಗಳಿಂದ ಆಗುತ್ತಿದೆ. ಆದರೆ ಇದುವರೆಗೆ ಯಾವುದೇ ಸರಕಾರವು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ.
ಪ್ರತಿ ವರ್ಷ ಕೂಡ ಮಳೆಗಾಲಕ್ಕೂ ಮುನ್ನ ಊರಿನ ಹಿರಿಯರು ಎಲ್ಲ ಸೇರಿ ಅಡಿಕೆ ತೆಂಗು ಮತ್ತು ಸ್ಥಳೀಯವಾಗಿ ಲಭ್ಯವಿರುವ ಮರಗಳನ್ನು ಬಳಸಿ ಪುಟ್ಟ ತೊರೆಗಳಿಗೆ ಕಿರು ಸೇತುವೆಯನ್ನು ನಿರ್ಮಿಸುತ್ತಾರೆ. ಈ ಸೇತುವೆಗಳೇ ಇಲ್ಲಿನ ಜನರ ಸಂಪರ್ಕ ಸಾಧನ. ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಈ ಮರದ ಸೇತುವೆ ಮೇಲೆ ಸಾಗುತ್ತಾ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಮಳೆ ಹೆಚ್ಚಾದಲ್ಲಿ ಈ ತೊರೆಗಳು ಉಕ್ಕಿ ಹರಿಯುವ ಹಿನ್ನೆಲೆಯಲ್ಲಿ ಈ ಭಾಗದ ಜನರ ಸಂಪರ್ಕ ಕೊಂಡಿ ಕಡಿತವಾಗುತ್ತದೆ. ಇಂತಹ ಅಪಾಯಕಾರಿಯಾಗಿರುವ ಸಂದರ್ಭದಲ್ಲಿ ಪ್ರಾಣ ಪಣಕ್ಕೆ ಇಟ್ಟು ದಾಟಬೇಕಿದೆ. ಈ ಸಾಹಸದ ವೇಳೆ ಅದೆಷ್ಟೋ ಮಂದಿ ಜೀವ ಕಳೆದುಕೊಂಡ ಉದಾಹರಣೆ ಕೂಡ ಇದೆ.
15 ಮನೆಗಳಿಗೆ ಇಲ್ಲ ರಸ್ತೆ ಸಂಪರ್ಕ
ಹಾರ್ಮಣ್ ಭಾಗದ ಈ ಪುಟ್ಟ ಕಿರು ಸೇತುವೆ ಸ್ಥಳೀಯರು ಬರುವರು ಸ್ವತಃ ತಾವೇ ಸಂಪರ್ಕಗಾಗಿ ನಿರ್ಮಿಸಿಕೊಂಡ ಸೇತುವೆ. ಇಲ್ಲಿನ ಸುತ್ತಮುತ್ತಲಿನ ಸುಮಾರು ಹತ್ತರಿಂದ ಹದಿನೈದು ಮನೆಗಳಿಗೆ ಯಾವುದೇ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ಈ ಕಿರು ಸೇತುವೆ ಸಂಪರ್ಕಕ್ಕೆ ಕೊಂಡಿ. ಪ್ರತಿನಿತ್ಯ ಶಾಲೆಗೆ ತೆರಳುವ ಪುಟ್ಟ ಪುಟ್ಟ ಮಕ್ಕಳು ಕಾಲೇಜಿಗೆ ತೆರಳುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದೇ ಕಾಲು ಸಂಕದ ಮೂಲಕ ನಗರದಲ್ಲಿರುವ ವಿದ್ಯಾ ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇನ್ನು ಈ ಭಾಗದಲ್ಲಿ ಯಾವುದಾದರೂ ಅವಘಡ ಅಥವಾ ಆರೋಗ್ಯ ಸಮಸ್ಯೆ ಕಾಡಿನಲ್ಲಿ ಅಪಾಯವನ್ನ ಹೆಗಲ ಮೇಲೆ ಹಾಕಿಕೊಂಡು ಈ ಕಿರು ಸೇತುವೆ ಮೂಲಕ ದಾಟಿ ತೆರಳಿ ಚಿಕಿತ್ಸೆ ಪಡೆಯಬೇಕಾದ ದುಸ್ಥಿತಿ ಈ ಭಾಗದಲ್ಲಿದೆ.
400ಕ್ಕೂ ಹೆಚ್ಚು ಕಾಲು ಸಂಕ
ಬೈಂದೂರು ಭಾಗದಲ್ಲಿ ಇಂತಹ 400ಕ್ಕೂ ಅಧಿಕ ಕಿರು ಸೇತುವೆಗಳಿದ್ದು ಇದುವರೆಗೆ ಕೆಲವೇ ಕೆಲವು ಕಿರುಸೇತುವೆಗಳನ್ನು ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಈ ಹಿಂದೆ ನರೇಗಾ ಯೋಜನೆ ಅಡಿ ಕಿರು ಸೇತುವೆಗಳ ನಿರ್ಮಾಣಕ್ಕೆ ಅನುದಾನ ಸಿಗುತ್ತಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಅದನ್ನು ಕೂಡ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದ ಯಾವುದೇ ಕಿರುತೆಗಳು ಅಭಿವೃದ್ಧಿಯಾಗುತ್ತಿಲ್ಲ.
ಒಟ್ಟಾರೆಯಾಗಿ ವಸ್ತು ಸ್ಥಿತಿ ಅರಿಯದ ಆಡಳಿತ ಯಾವುದೋ ಆಲೋಚನೆಯಲ್ಲಿ ಇನ್ಯಾವುದೋ ಯೋಜನೆಗಳಿಗೆ ಬ್ರೇಕ್ ಹಾಕಿರುವುದರಿಂದ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಇನ್ನಾದರೂ ಸರಕಾರ ಕಣ್ಣು ತೆರೆದು ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ.