ಬೆಂಗಳೂರು, ಜುಲೈ 1: ಕಾಂಗ್ರೆಸ್ ಪದಾಧಿಕಾರಿಗಳ ಜತೆ ಸೋಮವಾರ ನಡೆಸಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆ ದೃಷ್ಟಿಯಿಂದ ಹಾಗೂ ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಫೈಟ್ ಹೈಕಮಾಂಡ್ ಅಂಗಳಕ್ಕೂ ತಲುಪಿದ ಬೆನ್ನಲ್ಲೇ, ಪದಾಧಿಕಾರಿಗಳ ಜತೆ ಸಭೆ ನಡೆಸಿರುವ ಡಿಕೆ ಶಿವಕುಮಾರ್ ಈ ಮೂಲಕ ಟಕ್ಕರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಪದಾಧಿಕಾರಿಗಳ ಜತೆ ಡಿಕೆ ಶಿವಕುಮಾರ್ ನಡೆಸಿರುವ ಚರ್ಚೆ ಮತ್ತು ಆ್ಯಕ್ಷನ್ ಪ್ಲ್ಯಾನ್ ಸಂಬಂಧಿಸಿದ ವಿವರ ಇಲ್ಲಿದೆ.
- ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ.
- ಲೋಕಸಭೆ ಫಲಿತಾಂಶದ ಹಿನ್ನಡೆ ಬಗ್ಗೆ ವಿಚಾರಣೆ ನಡೆಸಲು ವಲಯವಾರು ಪ್ರತ್ಯೇಕ ಸಮಿತಿ ರಚನೆಗೆ ನಿರ್ಧಾರ.
- ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ/ ಕಾರಣಗಳ ಪತ್ತೆ ಹಚ್ಚುವುದು.
- ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ದಪಡಿಸಲು ವಲಯವಾರು ಸಮಿತಿ.
- ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯ ಕೆಲಸ ಮಾಡುವಂತೆ ಸೂಚನೆ.
- ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮತಿ ರಚನೆಗೂ ನಿರ್ಧಾರ.
- ಮಾಜಿ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆ ನಡೆಸಲಿರುವ ಡಿಕೆಶಿವಕುಮಾರ್.
- ಕೆಳಹಂತದಲ್ಲಿ ಪಕ್ಷ ಬಲವರ್ಧನೆ ಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ.
- ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ.
- ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ.
- ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್ ಗೆ ಪುನಶ್ಚೇತನ.
- ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ.
- ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಇಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ.
ಪ್ರಚಂಡ ಬಹುಮತಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಜೋಡೆತ್ತುಗಳಂತೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದರು. ಎಲ್ಲಾ ಅಂದುಕೊಂಡಂತೆಯೇ ಸಾಗುತ್ತಿದ್ದರೂ ಕೇವಲ ಒಂದು ವರ್ಷ ಆಗುಷ್ಟರಲ್ಲೇ ಇದೀಗ ಕಾಂಗ್ರೆಸ್ನಲ್ಲಿ ಸಿಎಂ, ಡಿಸಿಎಂ, ಕೆಪಿಸಿಸಿ ಹುದ್ದೆಯ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಿದೆ. ಸಚಿವ ಕೆಎನ್ ರಾಜಣ್ಣ ಸೇರಿದಂತೆ ಹಲವರು ಒನ್ ಮ್ಯಾನ್ ಒನ್ ಪೋಸ್ಟ್ ಸಂದೇಶ ರವಾನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಫೈಟ್ ಹೈಕಮಾಂಡ್ ಅಂಗಳಕ್ಕೂ ತಲುಪಿತ್ತು. ಇದೀಗ ಈ ಎಲ್ಲೆ ಬೆಳವಣಿಗೆಗೆ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.