ಬ್ರಿಡ್ಜ್‌ಟೌನ್(ಬಾರ್ಬಡೋಸ್): ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಲಿಷ್ಠ ತಂಡಗಳ ಮಧ್ಯೆ ಫೈನಲ್ ಪಂದ್ಯ ನಡೆಯುತ್ತಿದೆ.
ಹೌದು. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಜೇಯವಾಗಿ ಫೈನಲ್ ಪ್ರವೇಶಿಸಿವೆ. ಇದುವರೆಗಿನ ಟಿ20 ಇತಿಹಾಸದಲ್ಲಿ ಎರಡು ತಂಡಗಳು ಅಜೇಯವಾಗಿ ಫೈನಲ್ ತಲುಪಿರುವುದು ಇದೇ ಮೊದಲು. ಎರಡು ತಂಡಗಳು ಗುಂಪು, ಸೂಪರ್ 8 ವಿಭಾಗದಲ್ಲಿ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿವೆ.
ದಕ್ಷಿಣ ಆಫ್ರಿಕಾ 8 ಜಯದೊಂದಿಗೆ ಫೈನಲ್ ಪ್ರವೇಶಿಸಿದೆ. ಗುಂಪು ಹಂತದಲ್ಲಿ ಕೆನಡಾದೊಂದಿಗಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 7 ಜಯದೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ಅಜೇಯವಾಗಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ತಂಡ ಎಂಬ ವಿಶಿಷ್ಟ ಸಾಧನೆ ಮಾಡಲಿದೆ.
ಹಾಗೆ ನೋಡಿದರೆ ಭಾರತ ಕಠಿಣ ಎದುರಾಳಿ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಲೀಗ್‌ನಲ್ಲಿ ಪಾಕಿಸ್ತಾನ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸೆಮಿಯಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿದೆ. ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ, ಶ್ರೀಲಂಕಾ, ಸೂಪರ್ 8 ರಲ್ಲಿ ಇಂಗ್ಲೆಂಡ್, ವಿಂಡೀಸ್ ತಂಡವನ್ನು ಮಣಿಸಿದೆ. ಸೆಮಿಯಲ್ಲಿ ಅಫ್ಘಾನಿಸ್ತಾನ ದಕ್ಷಿಣ ಅಫ್ರಿಕಾಗೆ ಪ್ರಬಲ ಸ್ಪರ್ಧೆ ನೀಡಿರಲಿಲ್ಲ.
ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ವಿಶ್ವಕಪ್ ಫೈನಲ್ ಪ್ರವೇಶಿಸಿದರೆ ಭಾರತ ಮೂರನೇ ಬಾರಿ ಫೈನಲ್ ಪ್ರವೇಶಿಸಿದೆ. 2007ರಲ್ಲಿ ಚಾಂಪಿಯನ್ ಆಗಿದ್ದರೆ, 2014ರಲ್ಲಿ ಲಂಕಾ ವಿರುದ್ಧ ಫೈನಲ್‌ನಲ್ಲಿ ಭಾರತ ಸೋತಿತ್ತು.