ಗದಗ, ಜೂನ್.29: ಕಳ್ಳತನ, ದರೋಡೆ ಆರೋಪಿಯನ್ನು ಕರೆದೊಯ್ಯುವ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸರ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ನಡೆದಿದೆ. ಗದಗ ನಗರದ ಬೆಟಗೇರಿ ರೈಲ್ವೆ ಅಂಡರ್ ಬ್ರಿಜ್ಜ್ ಬಳಿ ದುಷ್ಕರ್ಮಿಗಳು ಪೊಲೀಸರ ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿ ಆರೋಪಿಯ ಜೊತೆ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ. ಗಾಯಾಳು ಪೊಲೀಸರನ್ನು ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾಬರಿ ಆರೋಪಿಯನ್ನು ಕರೆದೊಯ್ಯಲು ಗಂಗಾವತಿ ಪೊಲೀಸರು ಖಾಸಗಿ ವಾಹನದಲ್ಲಿ ಬಂದಿದ್ದರು. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಇನೋವಾ ಕಾರ್ ನಂಬರ್ KA 22 Z 1636ನಲ್ಲಿ ಗಂಗಾವತಿ ಪೊಲೀಸರು ಬಂದಿದ್ದರು. ಗದಗ ಎಸ್.ಎಂ. ಕೃಷ್ಣ ನಗರದಿಂದ ಆರೋಪಿ ಮೊಹಮ್ಮದ್ ಅಲಿ ಎಂಬುವವನನ್ನು ವಶಕ್ಕೆ ಪಡೆದು ತೆರಳುತ್ತಿದ್ದಾಗ ಹಲ್ಲೆ ನಡೆದಿದೆ. ಕಾರ್ ಅಡ್ಡಗಟ್ಟಿ ನಾಲ್ವರು ಅನಾಮಿಕರು ಗಂಗಾವತಿ ಟೌನ್ ಪೊಲೀಸ್ ಸ್ಟೇಷನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಮರಿಶಾಂತ ಗೌಡ ಎಂಬುವವರ ಮುಖ, ಕಿವಿಗೆ ಗಾಯಗಳಾಗಿವೆ. ಪಿಸಿ ಚಿರಂಜೀವಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಎಸ್ಐ ಶಿವಶರಣ, ಪಿಸಿ ವಿಶ್ವನಾಥ್, ಪಿಸಿ ಮೈಲಾರಪ್ಪ ಸೇರಿದಂತೆ ಐವರ ಪೊಲೀಸ್ ಸಿಬ್ಬಂದಿ ಟೀಂ ಮೇಲೆ ಹಲ್ಲೆ ನಡೆದಿದೆ. ಗಂಗಾವತಿಯ ಜಯನಗರ ಮನೆಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಶಕ್ಕೆ ಪಡೆಯಲಾಗಿತ್ತು.
ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ ಗದಗ SP
ಇನ್ನು ಗದಗ-ಬೆಟಗೇರಿಯ ಸಿಎಸ್ಐ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಗದಗ ಎಸ್ಪಿ ನೇಮಗೌಡ ಆರೋಗ್ಯ ವಿಚಾರಿಸಿದರು. ಸಿಬ್ಬಂದಿ ಭೇಟಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್ಪಿ, ಆರೋಪಿಯನ್ನ ವಶಕ್ಕೆ ಪಡೆಯಲು ಬಂದಾಗ ಹಲ್ಲೆ ನಡೆದಿದೆ. ಕಾರಿನ ಗ್ಲಾಸ್ ಒಡೆದು ಆರೋಪಿ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಪೊಲೀಸರಿಗೆ ಸಣ್ಣಪುಟ್ಟ ಗಾಯವಾಗಿದೆ. ದೂರಿನನ್ವಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಆರೋಪಿಗಳಿಗಾಗಿ ಶೋಧ
ಮತ್ತೊಂದೆಡೆ ಗದಗ ಬೆಟಗೇರಿ ಬಡಾವಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸರು ಗಂಗಾವತಿ ಪೊಲೀಸರ ಇನ್ನೋವಾ ವಾಹನ ವಶಕ್ಕೆ ಪಡೆದಿದ್ದು ವಾಹನ ಠಾಣೆ ಮುಂದೆ ನಿಂತಿದೆ. ಸದ್ಯ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗಾಗಿ ಹುಡುಕಾಟ ಶುರುವಾಗಿದೆ.