ಮಂಗಳೂರು, ಜೂನ್ 27: ಮಂಗಳೂರು ಗಡಿಭಾಗ ಕಾಸರಗೋಡಿನಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ. ಮಳೆಯಿಂದಾಗಿ ಮಧುವಾಹಿನಿ ನದಿ ತುಂಬಿ ತುಳುಕಿದ್ದು, ದೇವಸ್ಥಾನದ ಒಳಭಾಗದಲ್ಲಿ ನಾಲ್ಕೈದು ಅಡಿ ನೀರು ತುಂಬಿಕೊಂಡಿದೆ.
ದೇವಸ್ಥಾನ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿದ್ದು, ದ್ವೀಪದಂತೆ ಗೋಚರವಾಗುತ್ತಿದೆ. ಜಿಲ್ಲೆಯಾಧ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮತ್ತೊಂದೆಡೆ, ಮಂಗಳೂರಿನಲ್ಲಿಯೂ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿಸುತ್ತಿದ್ದು, ಮಳೆ ಸಂಬಂಧಿ ಅವಘಡದಿಂದ ಇಬ್ಬರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್ ಜಂಕ್ಷನ್‌ನಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿವೆ. ಅದರಲ್ಲಿ ಸ್ಕೂಟರ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಸವಾರ ಅದೇ ಗುಂಡಿಯಲ್ಲಿ ಸ್ಕೂಟರ್ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.