ದಕ್ಷಿಣ ಕನ್ನಡ: ರಾಜ್ಯದ ಕರಾವಳಿ ಪ್ರದೇಶದಲ್ಲಿ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಹಾದು ಹೋಗುವ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನದಿ ಯಾವ ಪ್ರಮಾಣದಲ್ಲಿ ಉಕ್ಕಿದೆ ಎಂದರೆ ಕುಮಾರಧಾರ ಕಿಂಡಿ ಆಣೆಕಟ್ಟು ಪೂರ್ತಿಯಾಗಿ ಮುಳುಗಡೆಯಾಗಿದೆ. ಇದನ್ನು ನೀವು ದೃಶ್ಯಗಳಲ್ಲಿ ನೋಡಬಹುದು. ಕುಮಾರಧಾರ ಸ್ನಾನಘಟ್ಟ ಸಹ ಮುಳುಗಡೆಯಾಗಿದೆ. ಇದೇ ಕಾರಣಕ್ಕಾಗಿ ಕುಕ್ಕೆಗೆ ಬರುವ ಭಕ್ತಾದಿಗಳು ನದಿಗಿಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ಜಾರಿ ಮಾಡಿದೆ. ನದಿ ತೀರದ ಮತ್ತೊಂದು ಭಾಗದಲ್ಲಿ ಕೆಲ ಭಕ್ತಾದಿಗಳು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಅವರು ಎಚ್ಚರವಹಿಸಿ ದಡದ ಮೇಲಷ್ಟೇ ಕುಳಿತು ಸ್ನಾನ ಮಾಡುತ್ತಿದ್ದಾರೆ. ನದಿ ಉಕ್ಕಿ ಹರಿಯುವಾಗ ಮೇಲಿಂದ ನೋಡುವವರಿಗೆ ನೀರು ನಿಧಾನಕ್ಕೆ ಮುಂದೆ ಹರಿಯುವಂತೆ ಭಾಸವಾಗುತ್ತದೆ. ಆದರೆ ಒಳಭಾಗಲ್ಲಿ ನೀರಿನ ಸೆಳೆತ ಜೋರಾಗಿರುತ್ತದೆ. ನೀರಿಗಿಳಿಯುವ ಜನ ಹರಿತದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಅಪಾಯವಿರುತ್ತದೆ. ಹಾಗಾಗೇ ಭಕ್ತಾದಿಗಳಿಗೆ ನದಿಗಿಳಿಯದಂತೆ ಕಟ್ಟೆಚ್ಚರ ನೀಡಲಾಗಿದೆ.