ಮತ್ತಷ್ಟು ಬಿಸಿಯಾಗಲಿದೆ ಟೀ, ಕಾಫಿ: ಬೆಲೆ ಏರಿಕೆಗೆ ಹೋಟೆಲ್ ಮಾಲೀಕರ ಚಿಂತನೆ

ಬೆಂಗಳೂರು, ಜೂನ್​ 26: ಪೆಟ್ರೋಲ್‌ ರೇಟ್‌ ಹೆಚ್ಚಾಯ್ತು, ಡಿಸೇಲ್‌ ದರ ಏರಿಕೆ ಆಯ್ತು, ಹಾಲಿನ ದರ ಕೂಡ ಏರಿಕೆ ಆಗಿದೆ. ಇದೀಗ ಜನರಿಗೆ ಮತ್ತೊಂದು ಶಾಕ್​ ಕಾದಿದೆ. ಅದೇನಂದ್ರೆ ಕಾಫಿ, ಟೀ ದರ ಕೂಡ ಏರಿಕೆಯ ಹಾದಿಯಲ್ಲೇ ಇದೆ. ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದರ ಏರಿಕೆಗೆ ರಾಜ್ಯ ಹೋಟೆಲ್ ಮಾಲೀಕರ ಸಂಘಟನೆಯಿಂದ ಚಿಂತನೆ ಮಾಡಲಾಗುತ್ತಿದೆ. ಹಾಗಾಗಿ ಕಾಫಿ, ಟೀ ಗೂ ಬೆಲೆ ಏರಿಕೆ ಬಿಸಿ ತಟ್ಟುತ್ತಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.

ಸಾಲು ಸಾಲು ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಎದುರಾಗುವ ನಷ್ಟ ಪರಿಗಣಿಸಿ ರಾಜ್ಯದಲ್ಲಿ ಹೋಟೆಲ್​ನಲ್ಲಿ ಕಾಫಿ, ಟೀ ಬೆಲೆ 2 ರೂ. ಏರಿಕೆಗೆ ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಸಾಧಕ ಬಾಧಕ ನೋಡಿಕೊಂಡು ಕಾಫಿ, ಟೀ 2 ರೂ. ಬೆಲೆ ಏರಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಈಗಾಗಲೇ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಕಾಫಿ ಹಾಗೂ ಟೀ ಪೌಡರ್​ಗಳ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಬೆಲೆ ಕಡಿಮೆ ಇದೆ. ಕನಿಷ್ಠ 2 ರೂ. ಏರಿಕೆಯ ಬಗ್ಗೆ ಯೋಜನೆ ಮಾಡಿದ್ದಾರೆ.

ಬೆಲೆ ಎಷ್ಟು ಏರಿಕೆ ಮಾಡಬೇಕು ಎನ್ನುವುದು ಆಯಾ ಹೋಟೆಲ್ ಮಾಲೀಕರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಸದ್ಯ ಸ್ವಲ್ಪ ದಿನ ಕಾದು ನೋಡಿ ಬೆಲೆ ಏರಿಕೆಗೆ ಚಿಂತನೆ ಮಾಡಿದ್ದಾರೆ.

ಕೆಎಂಎಫ್‌ ಅರ್ಧ ಲೀಟರ್‌ ಹಾಗೂ ಒಂದು ಲೀಟರ್ ಹಾಲಿಗೆ ದರ ಹೆಚ್ಚಿಸಿದೆ. ಆದರೆ ಹೆಚ್ಚುವರಿ 50 ಎಂಎಲ್‌ ಹಾಲು ಸೇರ್ಪಡೆ ಮಾಡಿದೆ. ಇವತ್ತಿನಿಂದ ಪರಿಷ್ಕೃತ ಹಾಲಿನ ಪಾಕೇಟ್‌ ಮಾರಾಟವಾಗುತ್ತಿದ್ದು, ಪರಿಷ್ಕೃತ ದರವೂ ಇರಲಿದೆ.

ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಹಿನ್ನಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಹಾಲಿನ ದರ ಹೆಚ್ಚಳ ಮಾಡಿದರೆ ಹೇಗೆ, ಗ್ಯಾರೆಂಟಿಗಳನ್ನು ಯಾರು ಕೇಳಿದ್ದು. ದರ ಹೆಚ್ಚಳದಿಂದ ತಿಂಗಳಿನಲ್ಲಿ ಹೆಚ್ಚಿನ ಹಣ ಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಜನರಿಗೆ ಒತ್ತಾಯಪೂರ್ವಕ ಕ್ರಮವಾಗಿದ್ದು, ದರ ಏರಿಕೆ ಬರೆ ಹಾಕುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.