ಶಿವಮೊಗ್ಗ, ಜೂ.23: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಜೋರಾಗಿದೆ. ಎಲ್ಲೆಂದರಲ್ಲಿ ಸುಲಭವಾಗಿ ಯುವಕರ ಕೈ ಸೇರುತ್ತಿದೆ. ಈ ಗಾಂಜಾ ಹಾವಳಿಯಿಂದ ನಗರದಲ್ಲಿ ಕ್ರೈಂಗಳು ಕೂಡ ನಡೆಯುತ್ತಿವೆ. ಈ ನಡುವೆ ಜೂನ್ 1 ರಿಂದ ಜೂ. 21 ವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಯ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಆಪರೇಶನ್ ಮಾಡಿದ್ದಾರೆ. ಗಾಂಜಾ ಸೇವನೆ ಮಾಡಿದ 54 ಪ್ರಕರಣ ಪತ್ತೆಯಾಗಿದ್ದು, ಇವರ ಮೇಲೆ ಕೇಸ್ ದಾಖಲಾಗಿದೆ. ಇನ್ನು ಜಿಲ್ಲೆಯಲ್ಲಿ 5 ಕೆಜಿ 839 ಗ್ರಾಂ ತೂಕದ ಒಣ ಗಾಂಜಾ ಮತ್ತು 9 ಕೆಜಿ 524 ಗ್ರಾಂನ ಹಸಿ ಗಾಂಜಾ ಗಿಡಿಗಳನ್ನು ಪತ್ತೆ ಮಾಡಿದ್ದಾರೆ. ಸೀಜ್ ಆಗಿರುವ ಎರಡು ಗಾಂಜಾ ಪ್ರಕರಣದ ಒಟ್ಟು ಮೌಲ್ಯ ಬರೋಬ್ಬರಿ 5.56 ಲಕ್ಷ ರೂಪಾಯಿ ಆಗಿದೆ. ಒಟ್ಟು 7 ಗಾಂಜಾ ಪ್ರಕರಣದಲ್ಲಿ 19 ವಿರುದ್ದ ಕೇಸ್ ದಾಖಲಾಗಿದೆ. ಇವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ಪೊಲೀಸರ ಅಪರೇಶನ್ ಗಾಂಜಾ ಯಶಸ್ವಿ
ಕಳೆದ ವರ್ಷ ಶಿವಮೊಗ್ಗದ ಪುರಲೆಯ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಬಳಿ ಮನೆಯಲ್ಲಿ ಮೆಡಿಕಲ್ ವಿದ್ಯಾರ್ಥಿಯು ಗಾಂಜಾ ಬೆಳೆಯುತ್ತಿರುವುದು ಪತ್ತೆಯಾಗಿತ್ತು. ಬಳಿಕ ವಿಚಾರಣೆ ಮಾಡಿದಾಗ ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ಗಾಂಜಾ ಪೇಡ್ಲರ್ ಆಗಿದ್ದರು. ಇವರ ಬಳಿಯ ಗಾಂಜಾವನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸೀಜ್ ಮಾಡಿದ್ದರು. ಸದ್ಯ 21 ಕೆ.ಜಿ. ಗಾಂಜಾ ಅಕ್ರಮ ಸಾಗಾಟ ಮಾಡುತ್ತಿದ್ದ ದೌಲತ್, ಮುಜೀಬ್, ಶೋಹೆಬ್, ಮಹ್ಮದ್ ಜಫ್ರುಲ್ಲಾ ನಾಲ್ವರಿಗೆ ಶಿವಮೊಗ್ಗ ಕೋರ್ಟ್ ಶಿಕ್ಷೆಯನ್ನು ವಿಧಿಸಿದೆ. ಹೀಗೆ ಮಲೆನಾಡಿನಲ್ಲಿ ಅನೇಕ ವರ್ಷಗಳಿಂದ ಗಾಂಜಾ ದಂಧೆಯು ಜೋರಾಗಿ ನಡೆಯುತ್ತಿದೆ. ಯಾವಾಗೆಲ್ಲ ಪೊಲೀಸರು ಗಾಂಜಾ ಆಪರೇಶನ್ ಮಾಡುತ್ತಾರೆ. ಕೆಲ ದಿನ ಗಾಂಜಾ ದಂಧೆಗೆ ಕಡಿವಾಣ ಬೀಳುತ್ತದೆ. ಬಳಿಕ ಮತ್ತೆ ಕೇಸ್ ಸೈಲೆಂಟ್ ಆಗುತ್ತಿದ್ದಂತೆ ಮತ್ತೆ ಗಾಂಜಾ ದಂಧೆಕೋರರ ಹಾವಳಿ ಹೆಚ್ಚಾಗುತ್ತಾ ಹೋಗುತ್ತದೆ.
ಹೀಗಾಗಿ ಪೊಲೀಸರು ಗಾಂಜಾದ ವಿರುದ್ಧ ನಿರಂತರ ಆಪರೇಶನ್ ಮಾಡಿ, ಮಲೆನಾಡಿನಲ್ಲಿ ಬೇರು ಸಮೇತ ಗಾಂಜಾ ದಂಧೆಯನ್ನು ಕಿತ್ತು ಹಾಕಬೇಕಿದ್ದು, ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ಆಪರೇಶನ್ ಮಾಡಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 20 ದಿನಗಳಲ್ಲಿ ಲಕ್ಷಾಂತರ ಮೌಲ್ಯದ ಹಸಿ ಮತ್ತು ಒಣ ಗಾಂಜಾ ಸೀಜ್ ಆಗಿದೆ. ಅನೇಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗಾಂಜಾ ದಂಧೆ ಕಡಿವಾಣಕ್ಕೆ ಶಿವಮೊಗ್ಗ ಎಸ್ಪಿ ಕಠಿಣ ಕ್ರಮಕ್ಕೆ ಮುಂದಾಗಿರುವುದು ಗಮನಾರ್ಹವಾಗಿದೆ.