ಬೆಂಗಳೂರು, ಜೂನ್ 23: ಒಂದು ವಾರದ ಹಿಂದೆ ಟೊಮೆಟೊ ಬೆಲೆ ಶತಕ ಭಾರಿಸಿತ್ತು. ಇದೀಗ ಸ್ವಲ್ಪ ಬೆಲೆ ಕಡಿಮೆಯಾಗಿದೆ. ಆದರೆ ಟೊಮೆಟೊ ಬೆಲೆ ಮಧ್ಯೆ ಈರುಳ್ಳಿ ಬೆಲೆ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಟೊಮೆಟೊ ಜೊತೆ ಜೊತೆಗೆ ಈರುಳ್ಳಿಯ ಬೆಲೆ ಏರಿಕೆಯಾಗುತ್ತಿದ್ದು, ಒಂದು ಕೆಜಿ ಈರುಳ್ಳಿಯ ಬೆಲೆ ಕೆಆರ್ ಮಾರುಕಟ್ಟೆಯಲ್ಲಿ 55 ರೂ. ಆಗಿದೆ. ಹೊರಗಡೆ 60 ರೂ. ಇದೆ.
ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಬರುತ್ತಿಲ್ಲ, ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 100 ರ ಗಡಿ ದಾಟುವ ಸಾಧ್ಯತೆ ಇದೆ. ಅಲ್ಲದೇ. ರಾಜ್ಯಕ್ಕೆ ಮುಂಗಾರು ಅವಧಿಗು ಮುನ್ನ ಪ್ರವೇಶಿಸಿದ್ದರಿಂದ ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ ರಾಜ್ಯದ ಗೋಡೌನ್ನಲ್ಲಿ ಈರುಳ್ಳಿ ಕಡಿಮೆ ಸ್ಟಾಕ್ ಇದೆ. ಹೀಗಾಗಿ ನಾಸಿಕ್ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರು ಈರುಳ್ಳಿ ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಾಪಾರಸ್ಥ ಮುಬಾರಕ್ ಹೇಳಿದರು.
ಬೆಲೆ ಏರಿಕೆಯಿಂದಾಗಿ ಬಡ ಜನರು ರೋಸಿಹೋಗಿದ್ದಾರೆ. ಜೀವನ ಮಾಡುವುದು ಕಷ್ಟ ಇದೆ. ಕಳೆದ ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆ ಜಾಸ್ತಿಯಾಗಿತ್ತು. ಈ ವಾರ ಈರುಳ್ಳಿಯ ಬೆಲೆ ಜಾಸ್ತಿಯಾಗುತ್ತಿದೆ. ಬರುವ ಕಡಿಮೆ ಸಂಬಳದಲ್ಲಿ ಹೇಗೆ ಜೀವನ ನಡೆಸುವುದು. ತರಕಾರಿಯ ಬೆಲೆ ಕೇಳಿಯೇ ಭಯವಾಗುತ್ತಿದೆ ಎಂದು ಗ್ರಾಹಕರಾದ ವನಿತಾ ಹೇಳಿದರು.