ಬಾಗಲಕೋಟೆ, ಜೂನ್ 17: ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುವ ಪ್ರೀತಿ ಬಹಳ ದಿನಗಳ ಕಾಲ ಅಥವಾ ಗಟ್ಟಿಯಾಗಿರುವುದಿಲ್ಲ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇಷ್ಟಾದರೂ ಅನೇಕರು ಪ್ರೀತಿಗೆ ಬಿದ್ದು ಬಲಿಯಾಗುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗದ ವಿಧವೆ ಮಹಿಳೆ ಮತ್ತು ವಿಜಯಪುರದ ಯುವಕ ಇಬ್ಬರು ಫೇಸ್ಬುಕ್ನಲ್ಲಿ ಲವ್ ಮಾಡಿದ್ದು ಬಳಿಕ ಕೊಲೆಯಲ್ಲಿ ಅಂತ್ಯವಾಗಿದೆ.
ಜೂನ್ 2ರಂದು ರಾತ್ರಿ ಕೊಲ್ಹಾರ ಬಳಿ ಕೃಷ್ಣಾ ನದಿಯಲ್ಲಿ ಕೊಲೆಗೈದು ಮಹಿಳೆಯನ್ನು ಎಸೆಯಲಾಗಿದೆ. ರೇವಣಸಿದ್ದಯ್ಯ (26) ಕೊಲೆ ಮಾಡಿದ ಯುವಕ. ಮಮತಾ (48) ಕೊಲೆಯಾದ ಮಹಿಳೆ. ಎಂಟು ತಿಂಗಳಿಂದ ಫೇಸ್ಬುಕ್ನಲ್ಲಿ ಪರಿಚಯವಿದ್ದು, ಬಳಿಕ ಸ್ನೇಹ ಆಗಿ ಲವ್ಗೆ ತಿರುಗಿತ್ತು.
ರೇವಣಸಿದ್ದಯ್ಯ ಮಮತಾಳಿಂದ ಹಣ ಪಡೆದಿದ್ದ. ವಾಪಸ್ ಕೊಟ್ಟಿರಲಿಲ್ಲ ಇದಕ್ಕಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ವಿಧವೆ ಮಮತಾ ರೇವಣಸಿದ್ದಯ್ಯನಿಗೆ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದಳೆಂದು ಹೇಳಲಾಗುತ್ತಿದೆ. ಮದುವೆಯಾಗೋದಾಗಿ ಮಮತಾಳನ್ನು ಬಬಲೇಶ್ವರಕ್ಕೆ ರೇವಣಸಿದ್ದಯ್ಯ ಕರೆಸಿಕೊಂಡಿದ್ದಾರೆ.
ನಂತರ ಜೂನ್ 2 ರಂದು ಬೀಳಗಿ ವ್ಯಾಪ್ತಿ ಕೃಷ್ಣಾ ನದಿ ಕಡೆ ಕರೆದುಕೊಂಡು ಹೋಗಿದ್ದು, ನದಿ ಬಳಿ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮಮತಾ ಕಾಣದಾದಾಗ ಶಿವಮೊಗ್ಗದಲ್ಲಿ ಕಾಣೆಯಾದ ದೂರು ದಾಖಲಾಗಿತ್ತು. ಇದೇ ಅವಧಿಯಲ್ಲಿ ಬೀಳಗಿ ಸಮೀಪದ ಕೃಷ್ಣಾ ನದಿ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಗುರುತು ಪತ್ತೆ ವೇಳೆ ಶವ ಮಮತಾಳದ್ದು ಎಂದು ತಿಳಿದುಬಂದಿದೆ.
ನಂತರ ಮಮತಾ ದೂರವಾಣಿ ಆಧರಿಸಿ ತನಿಖೆ ಶುರು ಮಾಡಿದ್ದ ಶಿವಮೊಗ್ಗ ಪೊಲೀಸರು ಸತ್ಯ ಪತ್ತೆ ಹಚ್ಚಿದ್ದಾರೆ. ಸದ್ಯ ಬೀಳಗಿ ಪೊಲೀಸರಿಗೆ ಪ್ರಕರಣ ಹಸ್ತಾಂತರ ಮಾಡಲಾಗಿದ್ದು, ರೇವಣಸಿದ್ದಯ್ಯರನ್ನು ಬೀಳಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.