25ರ ವರೆಗೆ ಕರ್ನಾಟಕದಲ್ಲಿ ಭಾರಿ ಮಳೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಕೆಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

ಬೆಂಗಳೂರು, ಜೂನ್ 22: ಆರಂಭದಲ್ಲೇ ರಾಜ್ಯಾದ್ಯಂತ ಅಬ್ಬರಿಸಿ ಬೊಬ್ಬಿರಿದಿದ್ದ ಮುಂಗಾರು ಮಳೆ ಕಳೆದ ಒಂದು ವಾರದಿಂದ ತುಸು ಕಡಿಮೆಯಾಗಿತ್ತು.‌ ಇದೀಗ ಮುಂದಿನ ಮೂರ್ನಾಲ್ಕು ದಿನಗಳ ಕಾಲ‌ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಪೂರ್ವ ಅರಬ್ಬೀ ಸಮುದ್ರದ ಕೇರಳ, ಕರ್ನಾಟಕ ಕರಾವಳಿ ಉದ್ದಕ್ಕೂ ಸುಳಿಗಾಳಿ ಪರಿಣಾಮ ಕರಾವಳಿ ಭಾಗದಲ್ಲಿ ಇವತ್ತಿನಿಂದ 25ರ ವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆ ಸಾಧ್ಯತೆ ಇದ್ದು, 25ರ ವರೆಗೆ ಕರಾವಳಿ ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿ ಶುಕ್ರವಾರವೇ 11 ಸೆ.ಮೀ, ಬೆಳಗಾವಿ ಲೊಂಡಾದಲ್ಲಿ 10 ಸೆ.ಮೀ, ಚಿಕ್ಕಮಗಳೂರಿನ ಕೊಟ್ಟಿಗೆರಿಯಲ್ಲಿ 3 ಸೆ.ಮೀ‌ ಮಳೆಯಾಗಿದೆ.

ಶುಕ್ರವಾರ ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮುಂತಾದ ಪ್ರದೇಶಗಳಲ್ಲಿ ಮಳೆಯಾಗಿದೆ. ಸಂಜೆ ವೇಳೆಗೆ ಮೂಡುಬಿದಿರೆಯಲ್ಲಿ ಭಾರೀ ಮಳೆ ಸುರಿದರೆ, ಉಳಿದ ಸಮಯದಲ್ಲಿ ಮೋಡ ಮತ್ತು ಬಿಸಿಲಿನ ಝಳವು ಕಂಡುಬಂದಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ನಾಳೆ ಭಾರಿ ಮಳೆ ನಿರೀಕ್ಷೆ

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ನಾಳೆ ಹಲವು ಕಡೆ ಮಳೆ ಸಾಧ್ಯತೆ ಇದ್ದು, ನಂತರ ವ್ಯಾಪಕ ಮಳೆಯಾಗಲಿದೆ. ಇನ್ನೂ ಇವತ್ತಿನಿಂದ 25ರ ವರೆಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ಭಾರಿ ಮಳೆ ಸಾಧ್ಯತೆ ಹಿನ್ನಲೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

25ರ ವರೆಗೆ ಬೆಳಗಾವಿ, ಧಾರವಾಡ, ಹಾವೇರಿ, ಮೈಸೂರ್, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, 25ರ ವರೆಗೆ ಬೆಂಗಳೂರಿಗೆ ಹಗುರದಿಂದ, ಸಾಧಾರಣ ಮಳೆ ಹೆಚ್ಚಿನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಮಟ ಮಟ ಮಧ್ಯಾಹ್ನವೇ ಕಾರ್ಪೋರೇಷನ್, ಮೆಜೆಸ್ಟಿಕ್, ಕೆ ಆರ್ ಸರ್ಕಲ್, ದಾಸರಹಳ್ಳಿ, ಬಾಗಲಗುಂಟೆ ಭಾಗ ಸೇರಿದಂತೆ ಹಲವೆಡೆ ಮಳೆಯಾಗಿತ್ತು. ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 5.2 ಮೀ.ಮೀ, ಹೆಚ್​ಎ‌ಎಲ್ ವಿಮಾನ ನಿಲ್ದಾಣದಲ್ಲಿ 1.9 ಮೀ.ಮೀ ಮಳೆಯಾಗಿತ್ತು.

ಮತ್ತೊಂದೆಡೆ, ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಭಾರಿ ಮಳೆಯಾಗಿತ್ತು. ಶುಕ್ರವಾರ ಉಡುಪಿ, ಮಣಿಪಾಲ, ಮಲ್ಪೆ, ಕಾಪು, ಬ್ರಹ್ಮಾವರ, ಹಿರಿಯಡ್ಕದಲ್ಲಿ ಎಡಬಿಡದೆ ಮಳೆಯಾಗಿದೆ. ಕುಂದಾಪುರ ಮತ್ತು ಬೈಂದೂರಿನಲ್ಲಿ ಭಾರೀ ಮಳೆಯಾಗಿದ್ದು, ಬಲವಾದ ಗಾಳಿಯಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.